Ratan Tata: ದೇಶದ ಅಗ್ರಗಣ್ಯ ಕೈಗಾರಿಕೋದ್ಯಮಿ ರತನ್ ಟಾಟಾ ನಿಧನ: ಹಲವು ಗಣ್ಯರಿಂದ ಸಂತಾಪ

Share to all

ಟಾಟಾ ಸನ್ಸ್ ಅಧ್ಯಕ್ಷ ರತನ್ ಟಾಟಾ ಮುಂಬೈನಲ್ಲಿ 86 ನೇ ವಯಸ್ಸಿನಲ್ಲಿ ಬುಧವಾರ ರಾತ್ರಿ ನಿಧನರಾದರು. ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು. ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ರಾಜ್ಯದ ಪ್ರಮುಖ ನಾಯಕರೂ ಕಂಬನಿ ಮಿಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ನುಡಿಗಳನ್ನು ಹಂಚಿಕೊಂಡಿದ್ದಾರೆ.

ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನನಗೆ ಅತೀವ ದುಃಖವಾಗಿದೆ. ಲೋಕೋಪಕಾರಿ ಮತ್ತು ಕೈಗಾರಿಕೋದ್ಯಮಿಯಾಗಿ ಅವರ ಪರಂಪರೆಯು ಅಸಂಖ್ಯಾತ ಜೀವನ ಮತ್ತು ಸಮುದಾಯಗಳನ್ನು ಆಳವಾಗಿ ಪ್ರಭಾವಿಸಿದೆ. ಅವರ ದೂರದೃಷ್ಟಿ, ಸಹಾನುಭೂತಿ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅಚಲವಾದ ಸಮರ್ಪಣೆ ಯಾವಾಗಲೂ ನೆನಪಿನಲ್ಲಿ ಉಳಿಯುತ್ತದೆ. ಈ ಸವಾಲಿನ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ ಎಂದು ಹೆಚ್‌.ಡಿ ಕುಮಾರಸ್ವಾಮಿ ಸಂತಾಪ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಟ್ವೀಟ್​ ಮಾಡಿ, ಹಿರಿಯ ಚೇತನಕ್ಕೆ ಅಶೃತರ್ಪಣ ಸಲ್ಲಿಸಿದ್ದಾರೆ

ರತನ್ ಟಾಟಾ ಅವರನ್ನು ಸ್ಮರಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರತನ್ ಟಾಟಾ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ. ಅವರು ನಮ್ಮ ಆರ್ಥಿಕತೆ, ವ್ಯಾಪಾರ ಮತ್ತು ಉದ್ಯಮಕ್ಕೆ ಗಮನಾರ್ಹ ಕೊಡುಗೆಗಾಗಿ ಹೆಸರುವಾಸಿಯಾದ ಭಾರತೀಯ ಉದ್ಯಮದ ಧೀಮಂತರಾಗಿದ್ದರು. ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಆಳವಾದ ಸಂತಾಪಗಳು. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ರಾಜನಾಥ್ ಸಿಂಗ್ ಸಂತಾಪ ನುಡಿಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು. ಅವಿವಾಹಿತ ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ದೇಶದ ಆಸ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಗಳಿಕೆಯನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ.

ರತನ್ ನಾವಲ್ ಟಾಟಾ ( ಡಿಸೆಂಬರ್ 28, 1937)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಸ್ಥಾಪಿಸಿದ್ದರು.

 


Share to all

You May Also Like

More From Author