ಟೀಮ್ ಇಂಡಿಯಾದ ಆಲ್ರೌಂಡರ್ ಪ್ರದರ್ಶನ: ಬಾಂಗ್ಲಾ ವಿರುದ್ಧ 86 ರನ್‌ʼಗಳ ಭರ್ಜರಿ ಜಯ!

Share to all

ಟೀಮ್ ಇಂಡಿಯಾದ ಆಲ್ರೌಂಡರ್ ಪ್ರದರ್ಶನದಿಂದ ಬಾಂಗ್ಲಾ ವಿರುದ್ಧ ಭಾರತವು 86 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ನಿತೀಶ್ ರೆಡ್ಡಿ ಮತ್ತು ರಿಂಕು ಸಿಂಗ್ ಬ್ಯಾಟಿಂಗ್‌ ಅಬ್ಬರಕ್ಕೆ ಬಾಂಗ್ಲಾದೇಶ ತಲೆಬಾಗಿದೆ. ಬಾಂಗ್ಲಾ ವಿರುದ್ಧ 86 ರನ್‌ಗಳ ಜಯ ಗಳಿಸಿದ ಟೀಂ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯನ್ನು 2-0 ರಿಂದ ಕೈವಶ ಮಾಡಿಕೊಂಡಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ 86 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

‌ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿತ್ತು. ನಿತೀಶ್‌ ರೆಡ್ಡಿ ಆಕರ್ಷಕ ಅರ್ಧಶತಕ (74 ರನ್‌, 34 ಎಸೆತ, 7 ಸಿಕ್ಸ್‌, 4 ಫೋರ್‌) ಸಿಡಿಸಿದರು. ಜೊತೆಗೆ ರಿಂಕು ಸಿಂಗ್‌ ಕೂಡ ಅಬ್ಬರದ ಬ್ಯಾಟಿಂಗ್‌ ಮೂಲಕ ಗಮನ ಸೆಳೆದರು. 29 ಬಾಲ್‌ಗಳಿಗೆ 53 ರನ್‌ ಸಿಡಿಸಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರೂ ಸೇರಿಸಿದ 108 ರನ್‌ ಗಳಿಸಿ ಗಮನ ಸೆಳೆದರು.

ಹಾರ್ದಿಕ್‌ ಪಾಂಡ್ಯ 19 ಎಸೆತಗಳಲ್ಲಿ 32 ರನ್‌ ಗಳಿಸಿ ತಂಡಕ್ಕೆ ನೆರವಾದರು. ಟೀಂ ಇಂಡಿಯಾ 9 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿತು. 222 ರನ್‌ ಬೃಹತ್‌ ಮೊತ್ತ ಬೆನ್ನತ್ತಿದ ಬಾಂಗ್ಲಾ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು ಕೇವಲ 135 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಟೀಂ ಇಂಡಿಯಾ ಪರ ನಿತೀಶ್ ಕುಮಾರ್ ರೆಡ್ಡಿ ಮತ್ತು ವರುಣ್ ಚಕ್ರವರ್ತಿ ತಲಾ 2 ವಿಕೆಟ್‌ ಕಿತ್ತರು. ಅರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಅಭಿಷೇಕ್ ಶರ್ಮಾ, ಮಯಾಂಕ್ ಯಾದವ್, ರಿಯಾನ್ ಪರಾಗ್ ತಲಾ 1 ವಿಕೆಟ್‌ ಕಬಳಿಸಿ ತಂಡದ ಗೆಲುವಿಗೆ ಆಸರೆಯಾದರು ಎನ್ನಲಾಗಿದೆ.


Share to all

You May Also Like

More From Author