ಹುಬ್ಬಳ್ಳಿ:- ಸ್ನೇಹಿತನ ಕೊಲೆಗೈದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ. 23 ವರ್ಷದ ಶಿವರಾಜ ಕಮ್ಮಾರ ಕೊಲೆಯಾದ ಯುವಕ ಎನ್ನಲಾಗಿದ್ದು, ಸುದೀಪ ರಾಯಾಪುರ, ಕಿರಣ್ ಕೊಲೆ ಮಾಡಿದ ಆರೋಪಿಗಳು.
ಶಿವರಾಜ ಕಮ್ಮಾರ ಮತ್ತು ಸುದೀಪ ರಾಯಾಪುರ ಇಬ್ಬರೂ ಸ್ನೇಹಿತರಾಗಿದ್ದು, ಶುಕ್ರವಾರ ಇಬ್ಬರು ಒಟ್ಟಿಗೆ ಮನೆಯಲ್ಲಿ ಹಬ್ಬ ಮಾಡಿದ್ದರು. ಹಬ್ಬ ಆಚರಿಸಿದ ಬಳಿಕ ಶಿವರಾಜ ಕಮ್ಮಾರ ಹೊರಗಡೆ ಹೋಗಿದ್ದಾನೆ. “ಬೇಗ ಬರುತ್ತೇನೆ ಅಂತ ಅಮ್ಮ” ಅಂತ ಹೇಳಿ ಹೋಗಿದ್ದಾನೆ. ಆದರೆ ಶಿವರಾಜ ಕಮ್ಮಾರ ಜೀವಂತವಾಗಿ ಮನೆಗೆ ಬರಲಿಲ್ಲ.
ಶಿವರಾಜ ಕಮ್ಮಾರನ ತಲೆಗೆ ರಾಡ್ನಿಂದ ಹೊಡೆದು, ಬಳಿಕ 30ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಗೋಪನಕೊಪ್ಪದ ಬಳಿ ಕೊಲೆ ಮಾಡಲಾಗಿದೆ. ಹೋಗಿ ಬರುತ್ತೇನೆ ಅಂತ ಹೇಳಿ ಹೋದ ಮಗ ಮರಳಿ ಜೀವಂತವಾಗಿ ಬಾರದೆ, ಶವವಾಗಿ ಬಂದಿದ್ದನ್ನು ಕಂಡು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ನಗರದ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.