ಬೆಂಗಳೂರು: ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಕಾರಣ ದಿನ ನಿತ್ಯದ ಕೆಲಸ ಕಾರ್ಯಗಳಿಗೆ ವರುಣ ಅಡ್ಡಿಯಾಗಿದ್ದಾನೆ. ಹೌದು ಆಗ್ನೇಯ ಬಂಗಾಳ ಉಪಮಹಾಸಾಗರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಇಷ್ಟು ದಿನ ಕಾಣಿಯಾಗಿದ್ದ ಸೂರ್ಯದೇವ ಇಂದು ಆಚೆ ಬಂದಿದ್ದಾನೆ. ಆದರೆ ಮಳೆ ಹೊಡೆತಕ್ಕೆ ಸಿಲುಕಿ ಅದರಿಂದ ಸಹಜ ಸ್ಥಿತಿಯತ್ತ ಮರಳುತ್ತಿರುವಾಗಲೇ ಬೆಂಗಳೂರಿಗೆ ಮತ್ತೆ ವರುಣನ ಎಚ್ಚರಿಕೆ ಕೊಟ್ಟಿದೆ.
ಅಕ್ಟೋಬರ್ 21ರವರೆಗೆ ನಗರದಲ್ಲಿ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ. ಮಾತನಾಡಿದ ರಾಜ್ಯ ಹವಾಮಾನ ಇಲಾಖೆಯ ತಜ್ಞ ಸಿ.ಎಸ್.ಪಾಟೀಲ್, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿ ಅ.21ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಹಾವೇರಿ, ಧಾರವಾಡ ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಈ 7 ಜಿಲ್ಲೆಗಳಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಅ.19ರವರೆಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಕರಾವಳಿ, ಉತ್ತರ, ದಕ್ಷಿಣ ಒಳನಾಡಿನಲ್ಲಿ ಇಂದು ವ್ಯಾಪಕ ಮಳೆಯಾಗಿದೆ. ಮಂಗಳೂರು, ಹಾವೇರಿ, ತುಮಕೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ದಾವಣಗೆರೆಯಲ್ಲಿ 9 ಸೆಂ.ಮೀ ಮಳೆಯಾಗಿದೆ. ನಿನ್ನೆಯಿದ್ದ ವಾಯುಭಾರ ಕುಸಿತ ಇಂದು ದುರ್ಬಲವಾಗಿದೆ. ಗಾಳಿಯ ಪರಿಚಲನೆ ಆಂಧ್ರದ ಕರಾವಳಿಯಲ್ಲಿ 5.8 ಕಿ.ಮೀ ಎತ್ತರದಲ್ಲಿದೆ ಎಂದು ತಿಳಿಸಿದ್ದಾರೆ.