ಬೆಲ್ಲ ಮತ್ತು ತುಪ್ಪ, ಈ ಎರಡೂ ಆಹಾರಗಳು ಸಾಮಾನ್ಯವಾಗಿ ಭಾರತೀಯ ಮನೆಗಳಲ್ಲಿ ಕಂಡುಬರುತ್ತವೆ ಮತ್ತು ಈ ಸಂಯೋಜನೆಯನ್ನು ಸಾಮಾನ್ಯವಾಗಿ ಊಟದ ನಂತರ ಸಿಹಿತಿಂಡಿಯಾಗಿ ಸವಿಯಲಾಗುತ್ತದೆ. ಅಲ್ಲದೇ ಇವುಗಳನ್ನು ತೂಕ ಇಳಿಸಲು ಕೂಡ ಬಳಸಲಾಗುತ್ತದೆ. ಬೆಲ್ಲ ಅಥವಾ ಜೇನುತುಪ್ಪವು ನಿಜವಾಗಿಯೂ ತೂಕವನ್ನು ಕಡಿಮೆ ಮಾಡುತ್ತದೆಯೇ? ಹೌದು ಎಂದಾದರೆ, ಎರಡಲ್ಲಿ ಯಾವುದು ಉತ್ತಮ? ಆಹಾರ ತಜ್ಞರಿಂದ ಸತ್ಯವನ್ನು ತಿಳಿದುಕೊಳ್ಳೋಣ.
ಈ ಬಗ್ಗೆ ಡಯೆಟಿಷಿಯನ್ ಒಬ್ಬರು ಮಾತನಾಡಿ, ಸಕ್ಕರೆಯನ್ನು ತ್ಯಜಿಸುವುದು ತೂಕ ಇಳಿಸಿಕೊಳ್ಳಲು ಪ್ರಯೋಜನಕಾರಿಯಾಗಿದೆ. ಯಾರಾದರೂ ಸಕ್ಕರೆಯ ಬದಲು ಬೆಲ್ಲ ಅಥವಾ ಜೇನುತುಪ್ಪವನ್ನು ಸೇವಿಸುತ್ತಿದ್ದರೆ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ
ಬೆಲ್ಲ ಮತ್ತು ಜೇನುತುಪ್ಪ ಎರಡೂ ನೈಸರ್ಗಿಕ ಸಕ್ಕರೆಯ ಮೂಲಗಳಾಗಿವೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ದೇಹವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಎರಡೂ ಪದಾರ್ಥಗಳು ತೂಕ ನಷ್ಟಕ್ಕೆ ಸಹಾಯಕವಾಗಿವೆ
ಬೆಲ್ಲವು ಕಬ್ಬಿಣ, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ನಂತಹ ಖನಿಜಗಳ ಜೊತೆಗೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇನ್ನು ಜೇನುತುಪ್ಪದ ಬಗ್ಗೆ ಹೇಳೋದಾದರೆ ಅದರ ಗ್ಲೈಸೆಮಿಕ್ ಇಂಡೆಕ್ಸ್ ಬೆಲ್ಲಕ್ಕಿಂತ ಕಡಿಮೆಯಾಗಿದೆ ಎಂದು ಆಹಾರ ತಜ್ಞರು ಹೇಳಿದರು. ಇದು ಉತ್ಕರ್ಷಣ ನಿರೋಧಕಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಜೇನುತುಪ್ಪವು ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ.
ಬೆಲ್ಲಕ್ಕೆ ಹೋಲಿಸಿದರೆ, ಜೇನುತುಪ್ಪದಲ್ಲಿ ಕ್ಯಾಲೊರಿಗಳ ಪ್ರಮಾಣವು ಸ್ವಲ್ಪ ಹೆಚ್ಚಾಗಿರುತ್ತದೆ. ಆದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ, ಅದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಸಕ್ಕರೆಗಿಂತ ಜೇನುತುಪ್ಪವು ಹೆಚ್ಚು ಪ್ರಯೋಜನಕಾರಿಯಾಗಿದೆ
ಜೇನು ಮತ್ತು ಬೆಲ್ಲ ಎರಡೂ ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿ. ಬೆಲ್ಲದಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ. ಜೇನುತುಪ್ಪವು ಜೀರ್ಣಕ್ರಿಯೆಯನ್ನು ಸಹ ಸುಧಾರಿಸುತ್ತದೆ. ಜೇನುತುಪ್ಪವು ನೈಸರ್ಗಿಕ ಕಿಣ್ವಗಳನ್ನು ಹೊಂದಿರುತ್ತದೆ, ಇದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ.
ಬೆಲ್ಲ ಮತ್ತು ಜೇನು ಎರಡೂ ತೂಕ ನಷ್ಟಕ್ಕೆ ಉತ್ತಮ ಆಯ್ಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ, ಆದರೆ ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ನೀವು ಆರೋಗ್ಯಕರ ಆಹಾರದೊಂದಿಗೆ ಇವೆರಡನ್ನೂ ಸೇವಿಸಬಹುದು
ಜೊತೆಗೆ ತೂಕವನ್ನು ಕಳೆದುಕೊಳ್ಳಲು ನಿಯಮಿತ ವ್ಯಾಯಾಮ, ಉತ್ತಮ ಜೀವನಶೈಲಿ ಮತ್ತು ಸಾಕಷ್ಟು ನಿದ್ರೆ ಮಾಡುವುದು ಬಹಳ ಮುಖ್ಯ. ತಿನ್ನುವುದು ಮತ್ತು ಕುಡಿಯುವುದನ್ನು ಹೊರತುಪಡಿಸಿ, ದೈಹಿಕ ಚಟುವಟಿಕೆಯು ತೂಕ ನಷ್ಟದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನೀವು ಮಧುಮೇಹ ಹೊಂದಿದ್ದರೆ, ಬೆಲ್ಲ ಅಥವಾ ಜೇನುತುಪ್ಪವನ್ನು ಸೇವಿಸುವ ಮೊದಲು ನೀವು ಆಹಾರ ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸಬೇಕು.