ಬೆಂಗಳೂರು:- ಕರ್ನಾಟಕದ ಮೂರು ಜಿಲ್ಲೆಗಳ ಉಪಚುನಾವಣೆ ಕಾವು ಜೋರಾಗಿದ್ದು, ಹೀಗಾಗಲೇ ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ಗೆ ಸಿಪಿ ಯೋಗೇಶ್ವರ್ ಸೇರ್ಪಡೆ ಆಗಿದ್ದಾರೆ.
ಹೀಗಾಗಿ ಅವರಿಗೆ ಚನ್ನಪಟ್ಟಣ ಟಿಕೆಟ್ ಕೊಡಲಾಗಿದೆ. ಬಳ್ಳಾರಿಯ ಸಂಸದ ಇ. ತುಕಾರಾಂ ಅವರ ಪತ್ನಿ ಇ ಅನ್ನಪೂರ್ಣ ಅವರು ಸಂಡೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಲಾಗಿದೆ.
ಅನ್ನಪೂರ್ಣ ಅವರು ಮೊದಲ ಬಾರಿಗೆ ಚುನಾವಣೆ ಸ್ಪರ್ಧಿಸುತ್ತಿದ್ದಾರೆ. ಯೋಗೇಶ್ವರ್ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಸ್ಪರ್ಧಿಸಿದ್ದಾರೆ. ಯೋಗೇಶ್ವರ್ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
ಶಿಗ್ಗಾಂವಿ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್ ಇನ್ನೂ ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಈ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ ಮತ್ತು ಮುಸ್ಲಿಂ ಮುಖಂಡರು ಆಯಾ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದು ಆಯ್ಕೆ ಕಗ್ಗಂಟಾಗಿದೆ. ಇಂದು ಅಭ್ಯರ್ಥಿಯನ್ನು ಘೋಷಿಸುವ ನಿರೀಕ್ಷೆಯಿದೆ.
ಶಿಗ್ಗಾಂವಿ, ಸಂಡೂರು, ಮತ್ತು ಚನ್ನಪಟ್ಟಣ ವಿಧಾನಸಭೆ ಕ್ಷೇತ್ರಗಳು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತುಕಾರಾಂ ಮತ್ತು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರಿಂದ ತೆರವಾದ ಕ್ಷೇತ್ರಗಳಾಗಿವೆ.