ತುಮಕೂರು:- ಸಾವು ಬರೋದು ನಮ್ಮ ಆಯಸ್ಸು ಮುಗಿದಾಗ ಮಾತ್ರ. ಆಯಸ್ಸು ಮುಗಿಯೋ ತನಕ ಸಾಕ್ಷಾತ್ ದೇವರೇ ಬಂದ್ರೂ ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ. ಎಸ್ ತಕ್ಕ ಉದಾಹರಣೆ ಎಂಬಂತೆ ತುಮಕೂರಿನಲ್ಲಿ ಆಶ್ಚರ್ಯಕರ ಘಟನೆ ಜರುಗಿದೆ.
ಭಾರಿ ಮಳೆ ಹಿನ್ನೆಲೆ ಆ ಕೆರೆ ತುಂಬಿ ತುಳುಕುತ್ತಿತ್ತು. ಈ ವೇಳೆ ಕೆರೆ ಕೋಡಿ ನೋಡಲು ಹೋದ ಯುವತಿ ಓರ್ವಳು ಕಾಲು ಜಾರಿ ಬಿದ್ದಿದ್ದಾಳೆ. ಆಕೆ ಸತ್ತೇ ಹೋದಳು ಎನ್ನುವಷ್ಟರಲ್ಲಿ ಆಕೆಯ ಬದುಕಿರುವ ಸುದ್ದಿ ಅಚ್ಚರಿ ಮೂಡಿಸಿದೆ.
ಎಸ್, ಇಲ್ಲಿನ ಮೈದಾಳ ಕೆರೆಯಲ್ಲಿ ಮುಳುಗಿ 19 ವರ್ಷದ ಯುವತಿ ಸಾವನ್ನಪ್ಪಿದ್ದಾರೆ ಎಂಬ ವರದಿ ಆಗಿತ್ತು. ಆದರೆ ಯುವತಿ ಸಾವಿನಿಂದ ಪಾರಾಗಿದ್ದಾಳೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ.
ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ ಕೆರೆ ಕೋಡಿ ನೀರಿನಲ್ಲಿ ಕಾಲು ಜಾರಿ ಯುವತಿ ಬಿದ್ದಿದ್ದಳು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸತತ 12 ಗಂಟೆಗಳ ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಣೆ ಮಾಡಿದ್ದಾರೆ.
ಕೆರೆ ಕೋಡಿಯ ನೀರಿನಲ್ಲಿ ಸಾವನ್ನೇ ಗೆದ್ದು ಬಂದ ಯುವತಿಯನ್ನು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ 19 ವರ್ಷದ ಹಂಸ ಎಂದು ಗುರುತಿಸಲಾಗಿದೆ. ನಿನ್ನೆ ಭಾನುವಾರ ರಜೆ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಹಂಸಾ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದರು. ಮಂದಾರಗಿರಿ ಬೆಟ್ಟದ ಸಮೀಪದಲ್ಲಿ ಮೈದಾಳ ಕೆರೆ ತುಂಬಿ ಕೋಡಿ ಬಿದ್ದಿತ್ತು.
ಮೈದಾಳ ಕೆರೆ ಕೋಡಿ ಬಿದ್ದಿರುವುದನ್ನು ನೋಡಲು ತೆರಳಿದ್ದ ಯುವತಿ, ನೀರು ಹರಿಯುವ ಸ್ಥಳದಲ್ಲಿ ನಿಂತು ಸೆಲ್ಫಿ ಫೋಟೋ ತೆಗೆದುಕೊಳ್ಳಲು ಹೋಗಿದ್ದಾರೆ. ಕೆರೆ ಕೋಡಿಯಲ್ಲಿ ಕಾಲು ಜಾರಿ ಬಿದ್ದು ಕಲ್ಲಿನ ಪೊಟರೆಯೊಳಗೆ ಸಿಲುಕಿಕೊಂಡಿದ್ದರು.
ಸೆಲ್ಫಿ ಆಪತ್ತಿನ ಈ ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ನಿನ್ನೆ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು.
ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆ ಕೋಡಿ ನೀರನ್ನ ಬೇರೆಡೆಗೆ ಡೈವರ್ಟ್ ಮಾಡಿ ಕಾರ್ಯಾಚರಣೆ ಆರಂಭಿಸಿದ್ದರು. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಹಂಸಾರನ್ನು ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಯುವತಿ ಸಾವನ್ನೇ ಗೆದ್ದು ಬಂದಿದ್ದಾರೆ.