ತಾಯಿ ಓರ್ವರು ಮಗನನ್ನು ಜೈಲಿಗೆ ಹಾಕಿ, ಇಲ್ಲ ಸಾಯಿಸಲು ಅನುಮತಿ ಕೊಡಿ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿರುವ ಘಟನೆ ಜರುಗಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚು ಗಾಂಜಾ ಚಟಕ್ಕೆ ಬಲಿ ಆಗ್ತಿದ್ದಾರೆ. ಅಲ್ಲದೇ ತಮ್ಮ ಮೈಮೇಲೆ ಪ್ರಜ್ಞೆ ಇಲ್ಲದೇ ವರ್ತಿಸುತ್ತಾ ಇದ್ದಾರೆ. ಇದರಿಂದ ಅವರ ಕುಟುಂಬದವರಿಗೂ ಇನ್ನಿಲ್ಲದ ಸಂಕಷ್ಟ.
ಇದೇ ರೀತಿ ಗಾಂಜಾ ಚಟಕ್ಕೆ ಬಲಿಯಾದ ಮಗನಿಂದ ರೋಸಿ ಹೋದ ತಾಯಿ ಒಬ್ಬರು ಆತನನ್ನು ಸಾಯಿಸಲು ಅನುಮತಿ ಕೊಡಿ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಘಟನೆ ನಡೆದಿದೆ. ತುರುವೇಕೆರೆಯ ರೇಣುಕಮ್ಮ ಎಂಬವರು ಪುತ್ರ ಅಭಿ ಗಾಂಜಾ ಮತ್ತು ಡ್ರಗ್ಸ್ ವ್ಯಸನಿಯಾಗಿದ್ದಾನೆ.
ಹೆಣ್ಣು ಮಕ್ಕಳನ್ನು ಕೆಣಕಿ ಒದೆ ತಿನ್ನುತ್ತಾನೆ. ಜನರು ಮನೆ ಮುಂದೆ ಬಂದು ಗಲಾಟೆ ಮಾಡುತ್ತಾರೆ. ನನ್ನ ಮಗ ಹೀಗೆ ಆಗಲು ಗಾಂಜಾ ಮತ್ತು ಡ್ರಗ್ಸ್ ವ್ಯಸನವೇ ಕಾರಣ. ಗಾಂಜಾ ಸೇವನೆಯಿಂದ ನನ್ನ ಮಗ ಹಾಳಾಗಿದ್ದಾನೆ. ತುರುವೇಕೆರೆ ಪೊಲೀಸರು ಗಾಂಜಾ ಹಾವಳಿ ತಡೆಯಬೇಕು. ಈತನ ಕಾಟಕ್ಕೆ ನಾನು ರೋಸಿ ಹೋಗಿದ್ದೇನೆ. ಹೀಗಾಗಿ ನನ್ನ ಮಗನನ್ನು ಜೈಲಿಗೆ ಹಾಕಿ ಅಥವಾ ವಿಷ ಹಾಕಿ ಸಾಯಿಸಲು ಅನುಮತಿ ನೀಡಿ” ಎಂದು ನೊಂದ ತಾಯಿ ರೇಣುಕಮ್ಮ ಕಣ್ಣೀರು ಹಾಕಿದ್ದಾರೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.