Champions trophy: ಪಾಕಿಸ್ತಾನದಲ್ಲಿ ಆಡಲು ಟೀಮ್ ಇಂಡಿಯಾ ಹಿಂದೇಟು: ಗೊಡ್ಡು ಬೆದರಿಕೆ ಹಾಕಿ ಸಂಕಷ್ಟಕ್ಕೆ ಸಿಲುಕಿತಾ ಪಾಕ್!

Share to all

ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ತಿಳಿಸಿದೆ ಎಂದು ವರದಿಯಾಗಿದೆ.

ಪಾಕಿಸ್ತಾನಕ್ಕೆ ಕ್ರಿಕೆಟ್​ ತಂಡವನ್ನು ಕಳುಹಿಸದಂತೆ ಭಾರತ ಸರ್ಕಾರ ಸಲಹೆ ನೀಡಿದೆ. ಹೀಗಾಗಿ ಭಾರತ ಆ ದೇಶಕ್ಕೆ ಪ್ರಯಾಣ ಮಾಡುವುದಿಲ್ಲ ಎಂದು ಬಿಸಿಸಿಐ ಐಸಿಸಿಗೆ ಸ್ಪಷ್ಟವಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.

ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ಹಕ್ಕು ಪಾಕ್ ಕ್ರಿಕೆಟ್ ಮಂಡಳಿಯ ಕೈಯಲ್ಲಿದ್ದು, ಆದರೆ ಪಾಕಿಸ್ತಾನದಲ್ಲಿ ಟೂರ್ನಿ ನಡೆದರೆ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಹೀಗಾಗಿ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸಬೇಕಾದ ಅನಿವಾರ್ಯತೆ ಪಿಸಿಬಿ ಮುಂದಿದೆ.

ಆದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜನೆಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಆಸಕ್ತಿ ತೋರಿಸುತ್ತಿಲ್ಲ. ಬದಲಾಗಿ ಪಾಕ್​ನಲ್ಲೇ ಟೂರ್ನಿ ಆಯೋಜಿಸುವುದಾಗಿ ಪಟ್ಟು ಹಿಡಿದಿದೆ. ಆದರೆ ಪಾಕಿಸ್ತಾನದಲ್ಲಿ ಪಂದ್ಯಾವಳಿ ನಡೆದರೆ, ಭಾರತ ತಂಡ ಹಿಂದೆ ಸರಿಯುವುದು ಖಚಿತ. ಹೀಗಾಗಿಯೇ ಇದೀಗ ಐಸಿಸಿ ಪರ್ಯಾಯ ಮಾರ್ಗಗಳನ್ನು ಎದುರು ನೋಡುತ್ತಿದೆ.

ಇತ್ತ ಪಾಕಿಸ್ತಾನ್ ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸದಿದ್ದರೆ, ಟೂರ್ನಿಯು ಬೇರೊಂದು ದೇಶಕ್ಕೆ ಸ್ಥಳಾಂತರವಾಗುವುದು ಖಚಿತ. ಈ ಅವಕಾಶವನ್ನು ಬಳಸಿಕೊಳ್ಳಲು ಇದೀಗ ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಮುಂದಾಗಿದೆ ಎಂದು ವರದಿಯಾಗಿದೆ

ಪ್ರಸ್ತುತ ಮಾಹಿತಿ ಪ್ರಕಾರ, ಸೌತ್ ಆಫ್ರಿಕಾ ಕ್ರಿಕೆಟ್ ಬೋರ್ಡ್ ಚಾಂಪಿಯನ್ಸ್ ಟ್ರೋಫಿ ಆತಿಥ್ಯಕ್ಕಾಗಿ ತೆರೆಮರೆಯಲ್ಲೇ ಪ್ರಯತ್ನ ಆರಂಭಿಸಿದೆ. ಇತ್ತ ಪಾಕಿಸ್ತಾನ್ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸದಿದ್ದರೆ, ಚಾಂಪಿಯನ್ಸ್​ ಟ್ರೋಫಿಯನ್ನು ನಾವು ಆಯೋಜಿಸುತ್ತೇವೆ ಎಂದು ಸೌತ್ ಆಫ್ರಿಕಾ ಕ್ರಿಕೆಟ್ ಮಂಡಳಿ ಐಸಿಸಿಗೆ ತಿಳಿಸಿದೆ.

ಅತ್ತ ಭಾರತ ತಂಡವು ಪಾಕಿಸ್ತಾನಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದು ಕುಳಿತಿರುವ ಪಾಕ್ ಕ್ರಿಕೆಟ್ ಮಂಡಳಿಗೆ ಇದೀಗ ಹೊಸ ಚಿಂತೆ ಶುರುವಾಗಿದೆ.


Share to all

You May Also Like

More From Author