IPL 2025 ರಲ್ಲಿ ಚೆನ್ನೈ ಪರ ಆಡುವ ಹುಮ್ಮಸ್ಸಿನಲ್ಲಿರುವ MS ಧೋನಿಗೆ ಬಿಗ್ ಶಾಕ್ ಎದುರಾಗಿದ್ದು, ಅವರ ವಿರುದ್ಧ ಕೌಂಟರ್ ಕೇಸ್ ದಾಖಲಾಗಿದೆ. ವ್ಯಾಪಾರ ವಂಚನೆ ಪ್ರಕರಣದಲ್ಲಿ ಜಾರ್ಖಂಡ್ ಹೈಕೋರ್ಟ್ ಎಂಎಸ್ ಧೋನಿಗೆ ನೋಟಿಸ್ ಕಳುಹಿಸಿದೆ. ಧೋನಿ ಅವರ ಹಳೆ ಬಿಸಿನೆಸ್ ಪಾರ್ಟನರ್ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಒಟ್ಟಾಗಿ ಧೋನಿ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ್ದಾರೆ.
ಪ್ರಕರಣವು ‘ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್’ ಹೆಸರಿನ ಕಂಪನಿಗೆ ಸಂಬಂಧಿಸಿದೆ. ಸಂಸ್ಥೆಯಲ್ಲಿ ದಿವಾಕರ್ ಮತ್ತು ಸೌಮ್ಯ ನಿರ್ದೇಶಕರಾಗಿದ್ದರು. ಕಳೆದ ಜನವರಿಯಲ್ಲಿ ಧೋನಿ ತಮ್ಮ ಮಾಜಿ ಪಾಲುದಾರರ ವಿರುದ್ಧ ಆರೋಪಿಸಿದ್ದರು.
‘ಎಂಎಸ್ ಧೋನಿ’ ಹೆಸರಿನಲ್ಲಿ ಭಾರತ ಮತ್ತು ವಿದೇಶಗಳಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸುವುದಾಗಿ ಧೋನಿ ಜತೆ ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ ಮೆಂಟ್ ಕಂಪನಿ ಒಪ್ಪಂದ ಮಾಡಿಕೊಂಡಿತ್ತು. ನಮ್ಮ ಒಪ್ಪಂದವು 2021ರಲ್ಲಿ ಕೊನೆಗೊಂಡಿದೆ. ಹೀಗಿದ್ದೂ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಕ್ರಿಕೆಟ್ ಅಕಾಡೆಮಿಗಳನ್ನು ತೆರೆಯುವುದನ್ನು ಮುಂದುವರೆಸಿದ್ದಾರೆ. ಇದರಿಂದ ನನಗೆ 15 ಕೋಟಿ ರೂಪಾಯಿ ನಷ್ಟ ಆಗಿದೆ ಎಂದು ಧೋನಿ ಆರೋಪಿಸಿದ್ದರು ಜನವರಿ 5 ರಂದು ಧೋನಿ ತಮ್ಮ ಮಾಜಿ ಪಾಲುದಾರರ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದರು.