ಬೆಂಗಳೂರು: ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ನಾಪತ್ತೆ ಮತ್ತು ರಫ್ತು ಮಾಡಿದ ಪ್ರಕರಣದಲ್ಲಿ ಕಾರವಾರ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಬಿಗ್ ರಿಲೀಫ್ ಸಿಕ್ಕಿದೆ. ಹೈಕೋರ್ಟ್ ಸತೀಶ್ ಸೈಲ್ ಸೇರಿ ಮೂರು ಮಂದಿಯ ಶಿಕ್ಷೆ ಅಮಾನತುಗೊಳಿಸಿ ಮಹತ್ವದ ಆದೇಶ ನೀಡಿದೆ. ಹೌದು ಸಿಬಿಐ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ಕೋರ್ಟ್,
ಆರೋಪಿಗಳಿಗೆ ಒಟ್ಟುನ ಆರು ಪ್ರಕರಣಗಳಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜನ ಪ್ರತಿನಿಧಿ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.
6 ವಾರದಲ್ಲಿ ದಂಡದ ಮೊತ್ತದಲ್ಲಿ ಶೇ.25ರಷ್ಟು ಠೇವಣಿ ಕೋರ್ಟ್ನಲ್ಲಿ ಇಡುವಂತೆ ಅಪರಾಧಿಗಳಿಗೆ ಸೂಚಿಸಿ ಶಿಕ್ಷೆ ಅಮಾನತಿನಲ್ಲಿಟ್ಟು ಆದೇಶಿಸಿದೆ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸೇರಿದಂತೆ ಇತರೆ ಅಪರಾಧಿಗಳು ನಾಳೆಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನಲೆ
2010ರಲ್ಲಿ ಬಳ್ಳಾರಿಯಿಂದ ಮ್ಯಾಂಗನೀಸ್ ಸಾಗಾಟ ಮಾಡಿ ಕಾರವಾರ ಬಂದರು ಮೂಲಕ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಸ್ಕ್ಯಾಮ್ ಅನ್ನು ಮಾಜಿ ಕರ್ನಾಟಕ ಲೋಕಾಯುಕ್ತರಾದ ಎನ್. ಸಂತೋಶ್ ಹೆಗ್ಡೆ ಬೆಳಕಿಗೆ ತಂದಿದ್ದರು. ಈ ವರದಿಯನ್ವಯ 7.74 ಮಿಲಿಯನ್ ಟನ್ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. 2006-07 ಹಾಗೂ 2010-11ರ ನಡುವೆ ಭಾರೀ ಪ್ರಮಾಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. ಇದರಿಂದ ಸರಕಾರದ ಖಜಾನೆಗೆ ಭಾರೀ ನಷ್ಟವುಂಟಾಗಿತ್ತು
ಮಲ್ಲಿಕಾರ್ಜುನ ಶಿಪ್ಪಿಂಗ್ ಕಾರ್ಪೊರೇಷನ್ ಮಾಲೀಕರಾಗಿದ್ದ ಸತೀಶ್ ಸೈಲ್ ವಿರುದ್ಧ ಕ್ರಿಮಿನಲ್ ಕಾನ್ಸ್ಪಿರೆಸಿ, ಚೀಟಿಂಗ್, ಪೋರ್ಜರಿ, ಟ್ರೆಸ್‌ಪಾಸ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ಸಿಬಿಐ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿತ್ತು. ಪ್ರಕರಣ ಸಂಬಂಧಿಸಿ 2013ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಸತೀಶ್ ಸೈಲ್ ಅವರನ್ನು ಬಂಧಿಸಿತ್ತು. ಇನ್ನು ಈ ಪ್ರಕರಣದಲ್ಲಿ ಅಂದಿನ ಬಿಎಸ್‌ಆರ್ ಕಾಂಗ್ರೆಸ್ ಕಂಪ್ಲಿ ಶಾಸಕ ಸುರೇಶ್ ಬಾಬು ಸಹ ಅರೆಸ್ಟ್ ಆಗಿದ್ದರು. ಬಳಿಕ ಸತೀಶ್ ಸೈಲ್ ಸಹ ಬಂಧನಕ್ಕೊಳಗಾಗಿದ್ದರು.