ಹಾಸನ :ಸಾಮಾಜಿಕ ಜಾಲತಾಣ ಇನ್ಸ್‌ಟಾಗ್ರಾಂನಲ್ಲಿ ಕಂಟೆಂಟ್ ವೀಡಿಯೋ ಮಾಡುವ ಸಲುವಾಗಿ ಹಾಸನದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ವಿದ್ಯಾರ್ಥಿಗಳು ಪ್ಲಾಸ್ಟಿಕ್ ಕವರ್ ಒಳಗೊಂಡ ಪೆಟ್ರೋಲ್ ಬಾಂಬ್ ಸ್ಫೋಟಿಸಿದ್ದಾರೆ.
ಖಾಸಗಿ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದ ವಿದ್ಯಾರ್ಥಿಗಳು ಬೊಮ್ಮನಾಯಕನಹಳ್ಳಿಯ ಎಚ್‌ಪಿಸಿಎಲ್ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಒಳಗೆ ಪೆಟ್ರೋಲ್ ತುಂಬಿ, ಅದಕ್ಕೆ ಬತ್ತಿ ಹಾಕಿ, ಬೆಂಕಿ ಕೊಟ್ಟಿದ್ದಾರೆ. ಕವರ್ ಸ್ಫೋಟಗೊಳ್ಳುತ್ತಿದ್ದಂತೆ ಸುಮಾರು 10 ಅಡಿ ಎತ್ತರದವರೆಗೂ ಬೆಂಕಿ ಹೊರಚಿಮ್ಮಿದೆ. ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಇನ್ಸ್‌ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬೆಂಕಿ ಹೊರಚಿಮ್ಮಿದ ನೂರು ಮೀಟರ್ ಮೀಟರ್ ದೂರದಲ್ಲೇ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ನಿಂತಿತ್ತು. ಇದನ್ನು ಪರಿಗಣಿಸದೇ ವಿದ್ಯಾರ್ಥಿಗಳು ಪೆಟ್ರೋಲ್ ಬಾಂಬ್ ಸ್ಫೋಟಿಸಿದ್ದಾರೆ. ಇನ್ನು ಪಕ್ಕದಲ್ಲಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. ಸಂಸ್ಥೆ ಕೂಡ ಇದೆ. ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ.
ಒಂದು ವೇಳೆ ಸ್ಫೋಟದಿಂದ ಹೊರಚಿಮ್ಮಿದ ಬೆಂಕಿ ಪೆಟ್ರೋಲ್ ತುಂಬಿದ ವಾಹನಕ್ಕೆ ತಗುಲಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು.ವಿದ್ಯಾರ್ಥಿಗಳು ದೀಪಾವಳಿ ಆಚರಣೆ ಹೆಸರಿನಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿದ್ದಾರೆ. ವಿದ್ಯಾರ್ಥಿ ತನ್ನ ಬೈಕ್‌ನಿಂದ ಪೆಟ್ರೋಲ್ ಹೊರತೆಗೆದು ಪ್ಲಾಸ್ಟಿಕ್ ಕವರ್‌ಗೆ ತುಂಬಿ, ಬೆಂಕಿ ಕೊಟ್ಟಿದ್ದಾರೆ. ಇದನ್ನು ಮತ್ತೋರ್ವ ವಿದ್ಯಾರ್ಥಿ ತನ್ನ ಮೊಬೈಲ್‌ನಲ್ಲಿ ವೀಡಿಯೋ ಮಾಡಿದ್ದಾನೆ ಎಂದು ತಿಳಿದು ಬಂದಿದೆ.