ರಾಯಚೂರು:– ಬಸ್ ಸಿಗದ ಹಿನ್ನೆಲೆ ಸಿಟ್ಟಿಗೆದ್ದ ಯುವಕನೋರ್ವ ಕುಡಿದು ಸಿಕ್ಕ-ಸಿಕ್ಕ ವಾಹನಗಳಿಗೆ ಕಲ್ಲು ತೂರಾಟ ಮಾಡಿರುವ ಘಟನೆ ರಾಯಚೂರಿನಲ್ಲಿ ಜರುಗಿದೆ.ಊರಿಗೆ ಹೋಗಲು ಬಸ್ ಸಿಗಲಿಲ್ಲ ಎಂದು ಸಿಕ್ಕ ಸಿಕ್ಕ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪಿಯನ್ನು ಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ತಿಮ್ಮಣ್ಣ ಎಂದು ಗುರುತಿಸಲಾಗಿದೆ. ಲಿಂಗಸುಗೂರಿನ ಗ್ರಾಮದ ಬಳಿ ನ.19ರ ಬೆಳಗಿನ ಜಾವ 2ರ ವೇಳೆ ಆರೋಪಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ. ಕಲ್ಲು ತೂರಾಟದಲ್ಲಿ ಮೂರು ಸಾರಿಗೆ ಬಸ್, ಕಾರು ಹಾಗೂ ಲಾರಿಗಳ ಗಾಜುಗಳು ಒಡೆದು ಹೋಗಿದ್ದವು. ಅಲ್ಲದೇ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಘಟನೆ ಪೊಲೀಸರಿಗೆ ತಲೆನೋವಾಗಿತ್ತು. ಕಳ್ಳತನ ಮಾಡಲು ವಾಹನಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎಂದು ಶಂಕಿಸಲಾಗಿತ್ತು. ಆರೋಪಿಗಳು ಕುಡಿದ ಮತ್ತಿನಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಓರ್ವನನ್ನು ಬಂಧಿಸಿದ್ದು, ಇನ್ನುಳಿದವರಿಗೆ ಶೋಧ ಮುಂದುವರಿದಿದೆ.