ನವದೆಹಲಿ:- ಡಿಸೆಂಬರ್ನಲ್ಲಿ ಬಿಜೆಪಿಯ ಐದಾರು ಬಾಗಿಲುಗಳು ಮುಚ್ಚಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾರ್ಮಿಕ ಮಾತುಗಳನ್ನಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಡಿಸೆಂಬರ್ನಲ್ಲಿ ಬಿಜೆಪಿಯ ಐದಾರು ಬಾಗಿಲುಗಳು ಮುಚ್ಚಲಿವೆ. ಆ ಬಳಿಕ ಪಕ್ಷದಲ್ಲಿ ಒಂದೇ ಬಾಗಿಲು ಆಗಲಿದೆ ಎಂದರು.
ಕರ್ನಾಟಕದಲ್ಲಿ ದೇವಾಲಯಗಳಿಗೂ ವಕ್ಫ್ ನೋಟಿಸ್ ನೀಡಿದ್ದಾರೆ. ವಕ್ಫ್ ವಿರುದ್ಧ ಮೂರು ತಂಡ ಮಾಡಿ ಅಹವಾಲು ಸ್ವೀಕರಿಸುತ್ತಿದ್ದೇವೆ. ಹೈಕಮಾಂಡ್ ನಾಯಕರು ನನಗೆ ಜವಾಬ್ದಾರಿಯನ್ನು ಕೊಟ್ಟಿದ್ದಾರೆ. ದೆಹಲಿಗೆ ಬಂದು ಚಾಡಿ ಹೇಳುವ ಕೆಲಸವನ್ನು ನಾನು ಮಾಡುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದೇನೆ. ನನ್ನ ವಿರುದ್ಧ ದೂರು ನೀಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಹೇಳಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಈಗಾಗಲೇ ಸೋಲೊಪ್ಪಿಕೊಳ್ಳುವ ಮಾತುಗಳನ್ನಾಡಿದ್ದಾರೆ. ಶಿಗ್ಗಾಂವಿಯಲ್ಲಿ ಹೆಚ್ಚು ಮತಗಳ ಅಂತರದಲ್ಲಿ ಭರತ್ ಗೆಲ್ಲುತ್ತಾರೆ. ಸಂಡೂರಿನಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ವಿಜಯೇಂದ್ರ ಹೇಳಿದರು.
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸನ್ನಿಹಿತವಾಗಿದೆ. ಅದನ್ನೇ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮೈಸೂರಿನಲ್ಲಿ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಗ್ಯಾರಂಟಿ ಯೋಜನೆಗಳನ್ನು ಈಡೇರಿಸಲು ಆಗದಿದ್ದರೆ ಜನರ ಕ್ಷಮೆ ಕೇಳಿ, ಅದನ್ನು ಬಿಟ್ಟು ಬಡವರಿಗೆ ತೊಂದರೆ ಕೊಡಬೇಡಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು.