ರಾಮನಗರ: ಚನ್ನಪಟ್ಟಣ ಉಪಚುನಾವಣೆಯ ರಿಸಲ್ಟ್ ಕ್ಷಣ, ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿತ್ತು. ಚನ್ನಪಟ್ಟಣದ ಮತಎಣಿಕೆಯ ಅಂಚೆ ಮತದಾನದಲ್ಲಿ ಸಿ.ಪಿ ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಸಮಬಲ ಕಾಯ್ದುಕೊಂಡಿದ್ದರು. ಆದರೆ ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ. ಅತ್ತ ನಿಖಿಲ್ಗೆ ಮೂರನೇ ಬಾರಿಯೂ ಮುಖಭಂಗವಾಗಿದೆ.
ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸಿಪಿವೈಗೆ ಈ ಬಾರೀ ದೇವೆಗೌಡರ ಕುಟುಂಬದ ಕೊನೆಯ ಕುಡಿ ನಿಖಿಲ್ ಎದುರಾಳಿಯಾಗಿದ್ದರು. ಇವರಿಬ್ಬರ ನಡುವೆ ನೇರ ಹಣಾಹಣಿಯಿದ್ದರು ಸಹ. ಡಿಕೆ ಶಿವಕುಮಾರ್ ಮತ್ತು ಕುಮಾರಸ್ವಾಮಿಗೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿತ್ತು. ಇದೀಗ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ಆದರೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಸತತವಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ 23 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಕಂಡಿದ್ದಾರೆ.