ನಿಖಿಲ್ ಗೆ ಹೀನಾಯ ಸೋಲು: JDSಗೆ ಶುರುವಾಯ್ತು ಅಸ್ತಿತ್ವದ ಚಿಂತೆ! ಮುಂದೇನು ಮಾಡ್ತಾರೆ HDK!

Share to all

ಬೆಂಗಳೂರು:- ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಗೆದ್ದು ಬೀಗಿದ್ದಾರೆ. ಇನ್ನೂ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಭಾರೀ ಅಂತರದಲ್ಲಿ ಸೋಲಾಗಿದೆ. ಇದು ಜೆಡಿಎಸ್ ಗೆ ಚಿಂತೆ ಉಂಟು ಮಾಡಿದೆ. ಉಪಚುನಾವಣೆ ಗೆಲುವಿನ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಡಿಕೆ ಸಹೋದರರು ಲಗ್ಗೆ ಇಟ್ಟಿದ್ದಾರೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಸಹೋದರರ ಪ್ರವೇಶದಿಂದಾಗಿ ಒಕ್ಕಲಿಗ ಜೆಡಿಎಸ್ ನಾಯಕರನ್ನು ಕಾಂಗ್ರೆಸ್​​ಗೆ ಸೆಳೆಯುವ ಆತಂಕ ದಳಪತಿಗಳಿಗೆ ಎದುರಾಗಿದೆ.

ಜೆಡಿಎಸ್ ಹಿರಿಯ ನಾಯಕ, ಶಾಸಕ ಜಿಟಿ ದೇವೇಗೌಡ ಈಗಾಗಲೇ ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಅವರು ಕಾಂಗ್ರೆಸ್​​ಗೆ ಸೇರುವ ಸಾಧ್ಯತೆಗಳಿವೆ ಎಂಬ ಊಹಾಪೋಹಗಳೂ ಹರಿದಾಡಲು ಆರಂಭವಾಗಿದೆ. ಇಂಥ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಮೇಲಿದೆ.

ಮತ್ತೊಂದೆಡೆ, ಉಪಚುನಾವಣೆ ಗೆಲುವಿನಿಂದ ಸಿಪಿ ಯೋಗೇಶ್ವರ್ ಹಾಗೂ ಡಿಕೆ ಸಹೋದರರ ನಡುವಣ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಇದರೊಂದಿಗೆ, ಜೆಡಿಎಸ್ ಭದ್ರಕೋಟೆ ಹಳೆ ಮೈಸೂರು ಭಾಗದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಡಿಕೆ ಸಹೋದರರು ಯೋಜನೆ ರೂಪಿಸಿದ್ದಾರೆ. ಹೀಗಾಗಿ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷಾಂತರ ಮಾಡುವ ಆತಂಕ ಜೆಡಿಎಸ್​​ಗೆ ಎದುರಾಗಿದೆ.

ನಿಖಿಲ್ ಸೋಲಿನಿಂದ ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲಿ ಅಧಿಕಾರದಿಂದ ದೂರ ಉಳಿದಂತಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ, ಸವಾಲು ಕುಮಾರಸ್ವಾಮಿಗೆ ಎದುರಾಗಲಿದೆ

ನಿನ್ನೆ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಂದಿದೆ. ಈಗ ಏನು ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. ಫಲಿತಾಂಶವನ್ನು ಒಪ್ಪಿಕೊಳ್ಳಲೇಬೇಕು ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ಫಲಿತಾಂಶ ಒಪ್ಪಿಕೊಳ್ಳಲೇಬೇಕು. ಏನೇ ಇದ್ದರೂ ಆಮೇಲೆ ಮಾತನಾಡುತ್ತೇನೆ ಎಂದರು


Share to all

You May Also Like

More From Author