ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ. ಈ ಮೂಲಕ ಸಿಎಂಗೆ ಸದ್ಯಕ್ಕೆ ಸಿಬಿಐ ಸಂಕಷ್ಟ ದೂರಾಗಿದೆ. ಹೌದು ಪ್ರಕರಣದ ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಆರೋಪಿ ದೇವರಾಜು ಪರ ವಕೀಲರು ವಾದ ಮಂಡಿಸಿ, ವಿಭಾಗೀಯ ಪೀಠದಲ್ಲಿ ಡಿ.5 ಕ್ಕೆ ವಿಚಾರಣೆ ಬಾಕಿ ಇದೆ. ಹೀಗಾಗಿ ವಿಭಾಗೀಯ ಪೀಠದಲ್ಲಿ ವಿಚಾರಣೆ ಮುಕ್ತಾಯದ ಬಳಿಕ ಇಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ನೇಹಮಯಿ ಕೃಷ್ಣ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದರು.
ಆ ಅರ್ಜಿ ಸಂದರ್ಭದಲ್ಲಿ ಇದನ್ನು ಮುಂದೂಡಬೇಕು ಅಂತ ಹೇಳಿಲ್ಲ ಎಂದು ಸ್ನೇಹಮಯಿ ಕೃಷ್ಣ ಪರ ವಕೀಲ ರಾಘವನ್ ತಿಳಿಸಿದರು. ಅಲ್ಲದೇ, ಇಂದು ಲೋಕಾಯುಕ್ತ ವರದಿ ಪಡೆಯಿರಿ ಎಂದು ರಾಘವನ್ ಮನವಿ ಮಾಡಿದರು. ಅದಕ್ಕೆ ನ್ಯಾಯಾಧೀಶರು, ಇವತ್ತು ಅರ್ಜಿ ವಿಚಾರಣೆ ನಡುತ್ತಿಲ್ಲ. ಹೀಗಾಗಿ ಡಿ.10 ಕ್ಕೆ ಮುಂದೂಡಲಾಗುವುದು ಎಂದು ಆದೇಶಿಸಿದರು. ಡಿಸೆಂಬರ್ 10ರ ಮಧ್ಯಾಹ್ನ 2:30 ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.