ಬೆಂಗಳೂರು:- ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಸಂವಿಧಾನ ದಿನಾಚರಣೆ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ಮಕ್ಕಳಿಗೂ ಸಂವಿಧಾನ ಅರ್ಥವಾಗಬೇಕು. ಶಾಲೆಗಳಲ್ಲೇ ಸಂವಿಧಾನ ಪೀಠಿಕೆ ಓದಿಸುತ್ತಿದ್ದೇವೆ ಎಂದರು.
ಸಂವಿಧಾನ ಬದಲಾವಣೆ ಆಗಬಾರದೆಂದು ಹೋರಾಟ ಮಾಡುತ್ತಿದ್ದೇವೆ. ಸಂವಿಧಾನದಲ್ಲಿ 106 ತಿದ್ದುಪಡಿಗಳಾಗಿವೆ. ಸಂವಿಧಾನ ಜಾರಿಗೆ ಬಂದು ಮುಂದಿನ ವರ್ಷ ಜನವರಿಗೆ 75 ವರ್ಷ ತುಂಬಲಿದೆ. ದೀರ್ಘಕಾಲದ ಶಾಂತಿಯಲ್ಲಿರುವ ಸಂವಿಧಾನ ಎಂದರೆ ಅದು ಭಾರತದ ಸಂವಿಧಾನ. ಸಂವಿಧಾನ ಎಷ್ಟೇ ಚೆನ್ನಾಗಿದ್ದರೂ ಒಳ್ಳೆಯವರ ಕೈಯಲ್ಲಿ ಇದ್ದರೆ ಒಳ್ಳೆಯದಾಗುತ್ತದೆ. ಕೆಟ್ಟವರ ಕೈಯಲ್ಲಿ ಇದ್ದರೆ ಕೆಟ್ಟದಾಗುತ್ತೆ ಅಂತ ಬಿಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ ಎಂದು ತಿಳಿಸಿದರು.
ಅಸಮಾನತೆ ಹೋಗಲಾಡಿಸದೆ ಹೋದರೆ ಸ್ವಾತಂತ್ರ್ಯ ಸಿಕ್ಕಿದ್ದು ಸಾರ್ಥಕವಾಗಲ್ಲ. ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಸಾಮಾಜಿಕ ಸ್ವಾತಂತ್ರ್ಯ ಕೊಡುವ ಕೆಲಸ ಆಗಬೇಕು. ಸ್ವಾತಂತ್ರ್ಯ, ಸಮಾನತೆ, ನ್ಯಾಯ ಮತ್ತು ಬ್ರಾತೃತ್ವ ಬಗ್ಗೆ ಅಂಬೇಡ್ಕರ್ ಸ್ಪಷ್ಟವಾಗಿ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು, ಸಮಾನತೆ ಸಿಗಬೇಕು. ಸಾಮಾಜಿಕ ವ್ಯವಸ್ಥೆಯ ಸಮಾಜ ಕಟ್ಟಬೇಕು ಎಂದರು ಆಶಯ ವ್ಯಕ್ತಪಡಿಸಿದರು.