ಏಳು ವರ್ಷಗಳಿಂದ ಆರ್‌ಸಿಬಿ ತಂಡದ ಭಾಗವಾಗಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಪ್ರಾಂಚೈಸಿ ಕೈ ಬಿಟ್ಟಿದ್ದು, ಇನ್ನು ಗುಜರಾತ್ ಟೈಟನ್ಸ್ ಪರ ಆಡಲಿದ್ದಾರೆ. ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಸಿರಾಜ್ ಅವರಿಗೆ ಗುಜರಾತ್ ಟೈಟಾನ್ಸ್ 12.25 ಕೋಟಿ ರೂಪಾಯಿ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲ ಕ್ಷಮತೆ ಹೊಂದಿದ್ದಾರೆ. ಗುಜರಾತ್ ಟೈಟಾನ್ಸ್ ತಂಡವನ್ನು ಸೇರುತ್ತಿದ್ದಂತೆ ಮೊಹಮ್ಮದ್ ಸಿರಾಜ್ ಸಾಮಾಜಿಕ ತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಆರ್‌ಸಿಬಿ ಅಭಿಮಾನಿಗಳು ಹಾಗೂ ಮ್ಯಾನೇಜ್ಮೆಂಟ್‌ಗೆ ಧನ್ಯವಾದ ತಿಳಿಸಿದ್ದಾರೆ.
ನನ್ನ ಪ್ರೀತಿಯ ಆರ್‌ಸಿಬಿಗೆ.. ಆರ್‌ಸಿಬಿ ಜೊತೆಗಿನ ಏಳು ವರ್ಷಗಳು ತುಂಬಾ ಖುಷಿ ನೀಡಿವೆ. ಆರ್‌ಸಿಬಿ ಜರ್ಸಿಯಲ್ಲಿನ ದಿನಗಳನ್ನು ನೆನಪಿಸಿಕೊಂಡಾಗ ಹೃದಯ ಉಕ್ಕಿ ಬರುತ್ತದೆ. ಕೃತಜ್ಞತೆ, ಪ್ರೀತಿಯ ಭಾವನೆ ನನ್ನಲ್ಲಿ ತುಳುಕುತ್ತದೆ. ಮೊದಲ ಬಾರಿಗೆ ನಾನು ತೊಟ್ಟ ಜರ್ಸಿ, ಆರ್‌ಸಿಬಿ ಜೊತೆಗಿನ ಬಂಧವನ್ನು ತುಂಬಾನೇ ಬಿಗಿಯಾಗಿಸಿದೆ. ಅದು ಅಷ್ಟರಮಟ್ಟಿಗೆ ನಮ್ಮ ಬಂಧವನ್ನು ಗಟ್ಟಿಯಾಗಿಸುತ್ತೆ ಅಂತಾ ಎಂದೂ ಯೋಚಿಸಿರಲಿಲ್ಲ.
ಆರ್‌ಸಿಬಿ ಪರ ನಾನು ಮಾಡಿದ ಮೊದಲ ಬಾಲ್ನಿಂದ ಹಿಡಿದು, ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಕಳೆದ ಪ್ರತಿಕ್ಷಣ. ಆ ನನ್ನ ಪ್ರಯಾಣ ಅಸಾಧಾರಣ. ಈ ಜರ್ನಿಯಲ್ಲಿ ಏರಿಳಿತಗಳಿದ್ದವು. ಆದರೆ ನೆನಪುಗಳು ಸ್ಥಿರವಾಗಿ ಉಳಿದಿವೆ. RCB ಅಂದರೆ ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ. ಇದು ಫ್ರಾಂಚೈಸಿಗಿಂತ ದೊಡ್ಡದು ಎಂದಿದ್ದಾರೆ.