ಲೋಕಸಭಾ ಚುನಾವಣೆ ಹಿನ್ನೆಲೆ
ಹುಬ್ಬಳ್ಳಿಯಲ್ಲಿ ಪ್ರಮುಖ ಲಿಂಗಾಯತ ಮುಖಂಡರ ಸಭೆ.
ಹುಬ್ಬಳ್ಳಿ: ಮುಂಬರುವ ಲೋಕಸಭಾ ಚುನಾವಣೆ ಅಂಗವಾಗಿ ವೀರಶೈವ ಲಿಂಗಾಯತ ಸಮಾಜದ ಕಾಂಗ್ರೆಸ್ ಬೆಂಬಲಿತ ಮುಖಂಡರುಗಳ ಪ್ರಮುಖ ಸಭೆ ನಡೆಯಿತು.
ನಗರದ ಕಾರವಾರ ರಸ್ತೆಯ ಪ್ರಕಾಶ್ ಟುಟೋರಿಯಲ್ಸ್ ನ ಬಸವ ನಿಲಯದಲ್ಲಿ ಜರುಗಿದ ಸಭೆಯಲ್ಲಿ ಸಭೆಯ ಅಧ್ಯಕ್ಷತೆಯನ್ನು ಕೆಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ್ ವಹಿಸಿದ್ದರು.
ನಂತರ ಮಾತನಾಡಿ,ಬಾಬಾಗೌಡ ಪಾಟೀಲ ಮುಂಬರುವ ಲೋಕಸಭಾ ಚುನಾವಣೆ ಆತ್ಯಂತ ಮಹತ್ವದಾಗಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೋರಿದ ನಿರ್ವಹಣೆ ಅಭೂತಪೂರ್ವವಾಗಿದ್ದು, ಎಲ್ಲ ಸಮುದಾಯಗಳ ಜೊತೆಗೆ ಲಿಂಗಾಯತ ಸಮುದಾಯ ಕಳೆದ ಬಾರಿ ಒಟ್ಟಾಗಿ ಪಕ್ಷಕ್ಕೆ ನೀಡಿದ ಬೆಂಬಲ ಎಂದಿಗೂ ಮರೆಯಲಾಗದು. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಮತಕ್ಷೇತ್ರದಿಂದ ಈ ಬಾರಿ ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಆದ್ದರಿಂದ ಕಾಂಗ್ರೆಸ್ ಬೆಂಬಲಿತ ವೀರಶೈವ ಲಿಂಗಾಯತ ಸಮಾಜದ ವಿವಿಧ ಒಳಪಂಗಡಗಳ ಮುಖಂಡರುಗಳು ಒಗ್ಗಟ್ಟಾಗಿ ನಿಯೋಗದೊಂದಿಗೆ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ಇತರೆ ಪ್ರಮುಖರಿಗೆ ಮನವಿ ಸಲ್ಲಿಸಿ ಹಕ್ಕೊತ್ತಾಯ ಮಂಡಿಸಬೇಕು ಎಂದು ತಿಳಿಸಿದರು.
ಅಲ್ಲದೇ, ಕಾಂಗ್ರೆಸ್ ಪಕ್ಷದ ಏಳ್ಗೆಗಾಗಿ ಕಳೆದ ಹಲವಾರು ವರ್ಷಗಳಿಂದ ಪಕ್ಷಕ್ಕೆ ನಿಷ್ಠರಾಗಿ ಹಗಲಿರುಳು ಸೇವೆ ಸಲ್ಲಿಸಿ ಅಧಿಕಾರ ವಂಚಿತ ಲಿಂಗಾಯತ ಸಮುದಾಯದ ಹಲವಾರು ನಾಯಕರುಗಳು, ಕಾರ್ಯಕರ್ತರು, ಪ್ರಮುಖರು ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿದ್ದು, ಅಂಥವರನ್ನು ಪಕ್ಷವು ಈವರೆಗೂ ಗುರುತಿಸದಿರುವದು ಖಂಡನೀಯ. ಈ ಹಿನ್ನೆಲೆಯಲ್ಲಿ ಪಕ್ಷದ ಬಗೆಗಿನ ಹಲವರ ಅಭಿಪ್ರಾಯವನ್ನು ಬದಲಿಸಲು ಹಾಗೂ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸುವಂತಾಗಲು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಮತಕ್ಷೇತ್ರದಿಂದ ಲಿಂಗಾಯತ ಸಮುದಾಯಕ್ಕೆ ಮೊದಲಾದ್ಯತೆ ಹಾಗೂ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಸಮಾಜಕ್ಕೆ ಹೆಚ್ಚಿನ ಸ್ಥಾನಮಾನ ನೀಡುವಂತೆ ಒತ್ತಾಯಿಸಲು ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಲೋಕಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಕೆಪಿಸಿಸಿ ಸದಸ್ಯ ವಿಜಯ ಕುಲಕರ್ಣಿ, ಡಾ ಶರಣಪ್ಪ ಕೊಟಗಿ ಮುಖಂಡರುಗಳಾದ ರಾಜಶೇಖರ್ ಮೆಣಸಿನಕಾಯಿ, ಸುರೇಶ್ ಸವಣೂರ್. ಪ್ರಕಾಶ ಗೌಡ ಪಾಟೀಲ್ , ಬಂಗಾರೇಶ್ ಹಿರೇಮಠ, ಕಲ್ಲಪ್ಪ ಎಲಿವಾಳ, ವಿನಯ್ ಬಾವಿಕಟ್ಟಿ, ಶಿವಪುತ್ರಪ್ಪ ಕಮತರ್, ಕುಮಾರ್ ಗೌಡ ಪಾಟೀಲ್ ( ನಸಬಿ ) ಸಂದೀಪ್ ಇಂಡಿ, ರವಿ ಹೊಸೂರು, ಉದ್ಯಮಿಗಳಾದ ದೊಡ್ಡ ಗೌಡರ್, ಸಂಗಮೇಶ್ ಬಿರಾದಾರ್ ಹಾಗೂ ಮಾಜಿ ಜಿ ಪಂ, ತಾ ಪಂ, ಎಪಿಎಂಸಿ ಸದಸ್ಯರು ಸೇರಿದಂತೆ ವಿವಿಧ ತಾಲೂಕುಗಳ ಸಮಾಜ ಭಾಂದವರು ಉಪಸ್ಥಿತರಿದ್ದು ಅನೇಕ ಸಲಹೆಗಳನ್ನು ನೀಡಿದರು.
ಪ್ರಾಸ್ತಾವಿಕ ಭಾಷಣವನ್ನು ರಾಜಶೇಖರ ಮೆಣಸಿನಕಾಯಿ ಮಾಡಿದರು. ಕೊನೆಯಲ್ಲಿ ಬಂಗಾರೇಶ ಹಿರೇಮಠ ವಂದಿಸಿದರು.
ಉದಯ ವಾರ್ತೆ ಹುಬ್ಬಳ್ಳಿ.