ರವಿವಾರದ ದ್ವಿತೀಯ ಟಿ20 ಪಂದ್ಯದಲ್ಲಿ ಶ್ರೀಲಂಕಾಕ್ಕೆ 7 ವಿಕೆಟ್‌ಗಳ ಸೋಲುಣಿಸಿದ ಭಾರತ ಇನ್ನೂ ಒಂದು ಪಂದ್ಯ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಮಳೆಯಿಂದ ಮೊಟಕುಗೊಂಡ ಎರಡನೇ ಟಿ20 ಪಂದ್ಯದಲ್ಲಿ ಭಾರತ ಇನ್ನೂ 9 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಿತು. ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮತ್ತು ಹೊಸ ನಾಯಕ ಸೂರ್ಯಕುಮಾರ್ ಅವರಿಗೆ ಸರಣಿ ಗೆಲುವಿನ ಸಿಹಿ ಸಿಕ್ಕಿದೆ.
ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್ ತಂಡಕ್ಕೆ ತಕ್ಕಂತೆ ಆಟ ಪ್ರದರ್ಶಿಸಿದ ಭಾರತ, ಯಾವುದೇ ಹಂತದಲ್ಲಿ ಕೂಡ ಶ್ರೀಲಂಕಾ ಮೇಲುಗೈ ಸಾಧಿಸಲು ಅವಕಾಶ ಕೊಡಲಿಲ್ಲ. ಕುತ್ತಿಗೆ ಸೆಳೆತದ ಕಾರಣ ಶುಭಮನ್ ಗಿಲ್ ಈ ಪಂದ್ಯದಲ್ಲಿ ವಿಶ್ರಾಂತಿ ಪಡೆದರು. ಅವರ ಬದಲಾಗಿ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಮತ್ತೆ ರನ್ ಗಳಿಸುವಲ್ಲಿ ವಿಫಲವಾದರು.
ಟಾಸ್ ಗೆದ್ದ ಭಾರತ ಮೊದಲು ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿತು. ಕುಶಾಲ್ ಪೆರೆರಾ 34 ಎಸೆತಗಳಲ್ಲಿ 53 ರನ್ ಗಳಿಸಿ ತಂಡಕ್ಕೆ ನೆರವಾದರು. ಕಮಿಂದು ಮೆಂಡಿಸ್ 26 ರನ್, ಪತುಮ್ ನಿಸಂಕ 32 ರನ್ ಗಳಿಸಿದರು. ಭಾರತದ ಪರವಾಗಿ ರಿವಿ ಬಿಷ್ಣೋಯ್ 4 ಓವರ್ ಗಳಲ್ಲಿ 26 ರನ್ ನೀಡಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್ ಆರಂಭವಾಗುತ್ತಿದ್ದಂತೆ ಮಳೆ ಮತ್ತೆ ಅಡ್ಡಿಪಡಿಸಿತು. ಮಳೆ ನಿಂತ ಬಳಿಕ ಡಿಎಲ್‌ಎಸ್ ನಿಯಮದಂತೆ ಭಾರತಕ್ಕೆ 8 ಓವರ್ ಗಳಲ್ಲಿ ಗೆಲುವಿಗಾಗಿ 78 ರನ್‌ಗಳ ಗುರಿ ನೀಡಿತು. ಸಂಜು ಸ್ಯಾಮ್ಸನ್ ಖಾತೆ ತೆರೆಯುವ ಮುನ್ನವೇ ಔಟಾದರು. ಬಳಿಕ ಜೊತೆಯಾದ ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಯಾದವ್ ಅಬ್ಬರಿಸಿದರು.
ಯಶಸ್ವಿ ಜೈಸ್ವಾಲ್ 15 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 30 ರನ್ ಗಳಿಸಿದರೆ, ಸೂರ್ಯಕುಮಾರ್ ಯಾದವ್ 12 ಎಸೆತಗಳಲ್ಲಿ 4 ಬೌಂಡರಿ 1 ಸಿಕ್ಸರ್ ಸಹಿತ 26 ರನ್ ಗಳಿಸಿದರು, ಹಾರ್ದಿಕ್ ಪಾಂಡ್ಯ 9 ಎಸೆತಗಳಲ್ಲಿ ಅಜೇಯ 22 ರನ್ ಗಳಿಸುವ ಮೂಲಕ ಭಾರತದ ಗೆಲುವನ್ನು ಖಚಿತಪಡಿಸಿದರು. ಈ ಮೂಲಕ ಒಂದು ಪಂದ್ಯ ಬಾಕಿ ಇರುವಂತೆ ಸರಣಿ ವಶಪಡಿಸಿಕೊಂಡಿದೆ.