ಗದಗ:- ಆತನನ್ನ ತಪಿತಸ್ಥ ಎನಬೇಕೋ, ಅಯ್ಯೋ ಪಾಪ ಎನಬೇಕೋ ಒಂದು ಗೊತ್ತಾಗೊಲ್ಲ ಮರ್ರೆ. ಆತ ಕೊಲೆ ಮಾಡಿದ್ದು ನಿಜ, ಆದ್ರೆ ಆತನ ಮನಸ್ಥಿತಿ ನೋಡಿದ್ರೆ ನಿಜಕ್ಕೂ ಬೇಸರ ವಿಚಾರ. ಯಾಕೆ ಈ ರೀತಿ ಹೇಳುತ್ತಿದ್ದೀವಿ, ಯಾರ್ ಬಗ್ಗೆ ಹೇಳುತ್ತಿದ್ದೀವಿ ಎಂದು ಯೋಚ್ನೆ ಮಾಡ್ತಿದ್ದೀರಾ. ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗತ್ತೆ. ಹೌದು, ತಾಯಿ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ಮಾನಸಿಕ ಅಸ್ವಸ್ಥ ಮಗನನ್ನು ಸೆರೆಹಿಡಿಯಲು ಖಾಕಿ ಹರಸಾಹಸ ಪಟ್ಟಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಕುರುಬರ ಓಣಿಯಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥರಾಗಿರುವ ಶಿವಪ್ಪ ತಟ್ಟಿ ಎಂಬಾತ ತನ್ನ ತಾಯಿ ಗೌರವ್ವನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದು ಗೌರವ್ವನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳನ್ನು ರೋಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಶಿವಪ್ಪ ಈ ಹಿಂದೆ ತಂದೆ ಮೇಲೂ ಹಲ್ಲೆ ಮಾಡಿದ್ದ. ಈಗ ತಾಯಿ ಮೇಲೂ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಇತ್ತೀಚೆಗೆ ತಾವು ಸಾಕಿದ್ದ ಕುದುರೆಯನ್ನೂ ಸಹ ಕೊಡಲಿಯಿಂದ ಹೊಡೆದು ಸಾಯಿಸಿದ್ದನಂತೆ.
ತಾಯಿಯ ಮೇಲೆ ಹಲ್ಲೆ ನಡೆಸಿ ರೋಡಿಗೆ ಬಂದು ಸಾರ್ವಜನಿಕರಿಗೂ ಕೊಡಲಿ ಝಳಪಿಸಿ ಅಟ್ಟಹಾಸ ಮೆರೆದಿದ್ದಾನೆ. ಈ ವೇಳೆ ಆತಂಕಗೊಂಡ ಸಾರ್ವಜನಿಕರು 112ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಮಾನಸಿಕ ಅಸ್ವಸ್ಥ ಆರೋಪಿಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಸತತ ಒಂದು ಗಂಟೆಗಳ ಕಾರ್ಯಾಚರಣೆ ಬಳಿಕ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.