ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲ ಎಂದಿರುವ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಹಾಸನ ಬಿಜೆಪಿ ಮುಖಂಡ ಪ್ರೀತಂ ಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ದೆಹಲಿಯಲ್ಲಿ ಮಾತನಾಡಿದ ಅವರು, ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಪಾದಯಾತ್ರೆಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ. ಆ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ತೀರ್ಮಾನ ಮಾಡಿದೆ ಎಂದರು.
ಬೆಂಗಳೂರಿನಿಂದ ಮೈಸೂರಿನ ವರೆಗೆ ನಮ್ಮ ಪ್ರಾಬಲ್ಯ ಇದೆ. ಚುನಾವಣೆ ಸಂದರ್ಭದಲ್ಲಿ ಒಟ್ಟಿಗೆ ಇರುವುದು ಬೇರೆ ರಾಜಕಾರಣ ಬೇರೆ. ಅವರು (ಬಿಜೆಪಿ) ನಡೆದುಕೊಂಡಿರುವ ರೀತಿ ಮನಸಿಗೆ ಬೇಸರ ಉಂಟುಮಾಡಿದೆ ಎಂದು ಕುಮಾರಸ್ವಾಮಿ ಹೇಳಿದರು.ಹೀಗಾಗಿ ಪಾದಯಾತ್ರೆಯಲ್ಲಿ ಜೆಡಿಎಸ್ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು. ಬಿಜೆಪಿಯ ಪಾದಯಾತ್ರೆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ ಎಂಬುದು ನಮ್ಮ ನಿಲುವು. ಹೀಗಾಗಿ ಅದರಿಂದ ಹಿಂದೆ ಸರಿದಿದ್ದೇವೆ. ಆ ಭಾಗದ ಜನರ ಭಾವನೆ ಮುಖ್ಯ. ಹಾಗಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.