ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಬಂಧಿತರಾಗಿದ್ದಾರೆ. ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿ ಆಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿ ಆಗಿದ್ದಾರೆ. ಪ್ರಕರಣದಲ್ಲಿ ಮೂರು ಜನ ಸಾಕ್ಷಿಗಳಿದ್ದು ಅವರನ್ನು ತುಮಕೂರಿನ ಜೈಲಿಗೆ ವರ್ಗಾವಣೆ ಮಾಡಲಾಗಿದೆ. ಪ್ರಸ್ತುತ ಆರೋಪಿಗಳೆಲ್ಲ ನ್ಯಾಯಾಂಗ ಬಂಧನದಲ್ಲಿದ್ದು, ಆಗಸ್ಟ್ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದರ ಬೆನ್ನಲ್ಲೇ ದೇವಸ್ಥಾನವೊಂದರಲ್ಲಿ ದರ್ಶನ ಪೋಟೋ ಇಟ್ಟು ಪೂಜೆ ಮಾಡಿರೋದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೊಲೆ ಆರೋಪದ ಮೇಲೆ ಜೈಲು ಸೇರಿರುವ ನಟ ದರ್ಶನನ ವಿವಿಧ ಭಂಗಿಯ ಪೋಟೋಗಳನ್ನು ದೇವರ ಮುಂದೆ ಇರಿಸಿ ಪೂಜಾರಿಗಳು ಪೂಜೆ ಮಾಡಿರುವ ಪೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ಐತಿಹಾಸಿಕ `ದೊಡ್ಡಬಸವೇಶ್ವರ ದೇವಸ್ಥಾನದಲ್ಲಿನ ಬೃಹತ್ ನಂದಿ ವಿಗ್ರಹದ ಮುಂದೆ ಅಮವಾಸ್ಯೆ ದಿನ ನಟ ದರ್ಶನ್ ಪೋಟೋಗಳನ್ನು ಪೂಜೆ ಮಾಡಿರುವುದರ ಬಗ್ಗೆ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇವರ ವಿಗ್ರಹ ಬಳಿ ದರ್ಶನ ಫೋಟೊ ಇಟ್ಟು ಪೂಜೆ ಮಾಡಿದ ಪ್ರಕರಣದ ವಿರುದ್ದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮಲ್ಲಿ ಎನ್ನುವಾತನನ್ನು ಅಮಾನತು ಮಾಡಿ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.