ಕೋಲಾರ: ಹೊಸದಾಗಿ ಮದುವೆಯಾದ ನವ ದಂಪತಿ ನಡುವೆ ನಡೆದ ಗಲಾಟೆ ಸಾವಿನಲ್ಲಿ ಅಂತ್ಯ ಕಂಡಿದೆ. ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು-ವರರಿಬ್ಬರು ಪರಸ್ಪರ ಹೊಡೆದಾಡಿಕೊಂಡಿರೋ ಘಟನೆ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನಡೆದಿದೆ. ಲಿಖಿತಶ್ರೀ (20) ಹಾಗೂ ನವೀನ್ (29) ಮೃತ ದುರ್ದೈವಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯಲ್ಲಿ ಸ್ಪೋಟಕ ಅಂಶ ಬೆಳಕಿಗೆ ಬಂದಿದೆ.
ಮದುವೆಯಾದ ಕೆಲವೇ ಗಂಟೆಗಳಲ್ಲಿ ನವ ವಧು ಹಾಗೂ ವರ ಪರಸ್ಪರ ಬಡಿದಾಡಿಕೊಂಡು ಸಾವನ್ನಪ್ಪಿದ್ದರು ಎನ್ನಲಾದ ಈ ಪ್ರಕರಣದಲ್ಲಿ ಬಳಿಕ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ಅನುಮಾನಗಳು ದಟ್ಟವಾಗಿದೆ. ಈ ಅನುಮಾನಕ್ಕೆ ಪುಷ್ಠಿಕೊಡುವಂತಹ ಮಹತ್ವದ ಸಾಕ್ಷಿಗಳು ಕೂಡ ಲಭ್ಯವಾಗುತ್ತಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯ ನವೀನ್ ಹಾಗೂ ಲಿಖಿತಶ್ರೀ ಸಾವಿನ ಪ್ರಕರಣ ಕೋಲಾರ ಜಿಲ್ಲೆ ಮಾತ್ರವಲ್ಲದೇ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಯಾಕೆಂದರೆ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಖುಷಿಯಾಗಿದ್ದ ಜೋಡಿ ಮದುವೆಯಾದ ದಿನವೇ ರೂಮ್ಗೆ ಹೋಗುತ್ತಿದ್ದಂತೆ ಭೀಕರವಾಗಿ ಗಾಯಗೊಂಡಿದ್ದರು. ಮೊದಲು ವಧು ಹಾಗೂ ವರರೇ ಪರಸ್ಪರ ಬಡಿದಾಡಿಕೊಂಡು ಸಾವನ್ನಪ್ಪಿದ್ದರು ಎನ್ನಲಾಗಿತ್ತು. ಆದರೆ ಈಗ ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿಯು ಭಾಗಿಯಾಗಿರುವ ಶಂಕೆ ಹೆಚ್ಚಾಗಿದೆ.
ಘಟನೆ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಕೆಜಿಎಫ್ ಆ್ಯಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ಕೊಲೆ ಪ್ರಕರಣ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೂಡ ತನಿಖೆ ಚುರುಕುಗೊಳಿಸಿದ್ದಾರೆ. ಸದ್ಯ ನವೀನ್ (29) ಹಾಗೂ ಲಿಖಿತಶ್ರೀ (20) ಮರಣೋತ್ತರ ಪರೀಕ್ಷೆ ವರದಿ ಕುಟುಂಬಸ್ಥರ ಹಾಗೂ ಪೊಲೀಸರ ಕೈ ಸೇರಿದ್ದು, ಪ್ರಕರಣದ ಬಗ್ಗೆ ಮತ್ತಷ್ಟು ಅನುಮಾನ ಹೆಚ್ಚಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಲಿಖಿತಾಶ್ರೀ ಬಲ ಅಂಗೈ ಹಾಗೂ ಕುತ್ತಿಗೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ವರ ನವೀನ್ ತಲೆಯ ನೆತ್ತಿಯ ಭಾಗ ಹಾಗೂ ತಲೆಯ ಹಿಂಭಾಗಕ್ಕೆ ಮಚ್ಚಿನಿಂದ ಹೊಡೆದ ಗಾಯಗಳಾಗಿವೆ. ಇಬ್ಬರಿಗೂ ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಒಬ್ಬರೂ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರು ಎನ್ನುವುದು ತಿಳಿದು ಬಂದಿದೆ.