ಬೆಂಗಳೂರು: ಮಹಿಳೆಯರ ಶೌಚಾಲಯದಲ್ಲಿ ವಿಡಿಯೋ ಚಿತ್ರಕರಣಕ್ಕೆ ಮೊಬೈಲ್ ಇಟ್ಟಿದ್ದ ಆರೋಪಿಯನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ. ಆರೋಪಿ ಮನೋಜ್ ಇದೇ ಕಾಫಿ ಶಾಪ್ನಲ್ಲಿ ಕಾಫಿ ಮೇಕರ್ ಆಗಿ ಕೆಲಸ ಮಾಡುತ್ತಿದ್ದನು. ಆರೋಪಿ ಮನೋಜ್ ಶನಿವಾರ (ಆ.10) ಬೆಳಗ್ಗೆ ಮಹಿಳೆಯರ ಶೌಚಾಲಯಕ್ಕೆ ಹೋಗಿದ್ದಾನೆ.
ಅಲ್ಲಿ ಕಸದ ಬುಟ್ಟಿಗೆ ಹೋಲ್ ಮಾಡಿದ್ದಾನೆ. ನಂತರ ಮೊಬೈಲ್ ಅನ್ನು ಫ್ಲೈಟ್ ಮೂಡ್ಗೆ ಹಾಕಿ ವಿಡಿಯೋ ಚಿತ್ರಕರಣಕ್ಕೆ ಇರಿಸಿ, ಹೊರ ಬಂದು ಯಥಾಪ್ರಕಾರ ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ನಂತರ ಶೌಚಾಲಯಕ್ಕೆ ಹೋದ ಮಹಿಳೆಯೊಬ್ಬರು ಮೊಬೈಲ್ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಸದಾಶಿವನಗರ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ಮನೋಜ್ನನ್ನು ಬಂಧಿಸಿದ್ದಾರೆ.
ಈ ಬಗ್ಗೆ ಸಿದ್ದಾರ್ಥ ಎಂಬುವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ, “ಬೆಂಗಳೂರಿನ ಥರ್ಡ್ ವೇವ್ ಕಾಫಿ ಔಟ್ಲೆಟ್ನ ವಾಶ್ರೂಮ್ನಲ್ಲಿ ಹಿಡನ್ ಕ್ಯಾಮೆರಾ ಪತ್ತೆಯಾಗಿದೆ ಎಂದು ನಂಬಲಾಗುತ್ತಿಲ್ಲ. ಅಂತಹ ಜನಪ್ರಿಯ ಸ್ಥಳದಲ್ಲಿ ಇದು ಸಂಭವಿಸಬಹುದು ಎಂಬುದು ಹುಚ್ಚುತನದ ಸಂಗತಿ ಎಂದುಟ್ವೀಟ್ ಮಾಡಿದ್ದಾರೆ.
ಇದಕ್ಕೆ ಥರ್ಡ್ ವೇವ್ ಕೆಫೆ ಇಂಡಿಯಾ ಪ್ರತಿಕ್ರಿಯಿಸಿದ್ದು, ನಮ್ಮ ಬೆಂಗಳೂರಿನ ಬಿಇಎಲ್ ರಸ್ತೆಯ ಶಾಖೆಯಲ್ಲಿ ನಡೆದ ಅಹಿತಕರ ಘಟನೆಗೆ ನಾವು ವಿಷಾದಿಸುತ್ತೇವೆ. ಮತ್ತು ಥರ್ಡ್ ವೇವ್ ಕಾಫಿಯಲ್ಲಿ ಅಂತಹ ಕ್ರಮಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಸಿಬ್ಬಂದಿಯನ್ನು ತಕ್ಷಣವೇ ವಜಾಗೊಳಿಸಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆ ನಮಗೆ ಬಹಳ ಮುಖ್ಯ. ಈ ಪರಿಸ್ಥಿತಿಯನ್ನು ನಾವು ತ್ವರಿತವಾಗಿ ಪರಿಹರಿಸಿದ್ದೇವೆ ಎಂದಿದೆ.