ಕೆಎಸ್ ಸಿಎ ಅಕ್ರಮ ನೇಮಕಾತಿ: ಕನ್ವೇನರ್ ಭೂಸದಗೆ ತುರ್ತು ನೊಟೀಸ್ ಜಾರಿ.
ಹುಬ್ಬಳ್ಳಿ: ಕೆಎಸ್ ಸಿಎ ಈಗಷ್ಟೇ ನಡೆಸಿದ 19 ಮತ್ತು 23 ವಯೋಮಿತಿಯ ಧಾರವಾಡ ಜಿಲ್ಲಾ ಮಟ್ಟದ ಕ್ರಿಕೆಟ್ ಪಟುಗಳ ಆಯ್ಕೆಯಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿಲ್ಲ ಎಂದು ಆರೋಪಿಸಿ ನ್ಯಾಯಾಲಯದ ಮೆಟ್ಟಿಲೇರಿದ ಸಂತ್ರಸ್ತ ಕ್ರೀಡಾಪಟುಗಳ ಪಾಲಕರ ಮನವಿ ಪುರಸ್ಕರಿಸಿ, ನಗರದ ಪ್ರಧಾನಿ ದಿವಾಣಿ ನ್ಯಾಯಾಲಯ (ಕಿರಿಯ ವಿಭಾಗ) ಪ್ರತಿವಾದಿಗೆ ತುರ್ತು ನೋಟಿಸ್ ಜಾರಿ ಮಾಡಿ ಆದೇಶಿಸಿದೆ.
ಲಕ್ಷ್ಮಿಬಾಯಿ ರಾಘವೇಂದ್ರ ಶೆಲ್ಲೇದ ಎಂಬ ಪಾಲಕರು ಸೇರಿದಂತೆ ಒಟ್ಟು 6 ಜನ ಸಂತ್ರಸ್ತ ಪಾಲಕರು, ಕೆಎಸ್ ಸಿಎ ನಿಮಂತ್ರಕ ನಿಖಿಲ್ ಭೂಸದ, 19 ಮತ್ತು 23 ವಯೋಮಿತಿಯ ಧಾರವಾಡ ಝೋನ್ ಗಾಗಿ ನಡೆದಿರುವ ಆಯ್ಕೆಯಲ್ಲಿ ಕೆಎಸ್ ಸಿಎ ನಿಯಮಾವಳಿಗಳನ್ನು ಗಾಳಿಗೆ ತೂರಿ ಮನ್ಸೋ ಇಚ್ಛೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ.
ಆ ಮೂಲಕ ನಿಮಂತ್ರಕ ನಿಖಿಲ್ ಭೂಸದ, ನೂರಾರು ಪ್ರತಿಭಾವಂತ ಕ್ರಿಕೆಟ್ ಪಟುಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸಂತ್ರಸ್ತರ ಪಾಲಕರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಬಿ.ಎಸ್. ಅಸುಂಡಿ, ಕೆಎಸ್ ಸಿಎ ಧಾರವಾಡ ಘಟಕದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯಶಸ್ವಿಯಾದ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಪ್ರತಿವಾದಿ ನಿಖಿಲ್ ಭೂಸದ ಅವರಿಗೆ, ನ್ಯಾಯಾಲಯಕ್ಕೆ ತುರ್ತು ಹಾಜರಾಗುವಂತೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಇದೇ 23 ಕಾಯ್ದಿರಿಸಿ ಆದೇಶ ನೀಡಿದ್ದಾರೆ.