ಕೋಲಾರ:- ಪೊಲೀಸ್ ಅಂದ್ರೆ ನಮಗೆ ಧೈರ್ಯ ಇರಬೇಕೇ ವಿನಹ, ಭಯ ಇರಬಾರದು. ಅದೇ ಪೊಲೀಸರು ಕೂಡ ತಮ್ಮ ಅಧಿಕಾರ ಬಳಸಿಕೊಂಡು ಬಡವರ ಮೇಲೆ ದೌರ್ಜನ್ಯ ಮಾಡಬಾರದು. ರಕ್ಷಿಸಬೇಕಾದವರೆ ಭಕ್ಷಕರಾದರೆ, ರಕ್ಷಣೆಗಾಗಿ ಸಾಮಾನ್ಯರು ಎಲ್ಲಿಗೆ ಹೋಗೋದು ಎಂಬ ಪ್ರಶ್ನೆ ಈ ಸ್ಟೋರಿ ನೋಡಿದ್ರೆ ತಿಳಿಯುತ್ತೆ. ಹೌದು, ಕೋಲಾರ ಜಿಲ್ಲೆಯ ಬಂಗಾರಪೇಟೆಯ ಇನ್ಸ್ಪೆಕ್ಟರ್ ಓರ್ವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.
ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಲೇರಿದ ಮಹಿಳೆಗೆ ಬಂಗಾರಪೇಟೆ ಪೊಲೀಸ್ ಠಾಣೆಯ ಸಿಪಿಐ ನಂಜಪ್ಪ ಎಂಬಾತ ಕಿರುಕುಳ ನೀಡುತ್ತಿದ್ದಾರೆ. ಲೈಂಗಿಕವಾಗಿ ಸಹಕರಿಸದಿದ್ದರೆ ಸುಳ್ಳು ಕೇಸ್ ಹಾಕಿಸಿ ಒಳಗೆ ಹಾಕಿಸುವುದಾಗಿ ಬೆದರಿಸುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಮಂಜುಳ ಎಂಬ ಮಹಿಳೆ ಈ ರೀತಿ ಆರೋಪ ಮಾಡಿದ್ದಾರೆ. ಪಕ್ಕದ ಮನೆಯವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದು, ಇದರ ಬಗ್ಗೆ ದೂರಲು ಪೊಲೀಸ್ ಠಾಣೆಗೆ ಬಂದ ನಮ್ಮನ್ನೇ ಶೋಷಿಸಲಾಗುತ್ತಿದೆ. ಠಾಣೆಗೆ ಕರೆಸಿ ನನ್ನನ್ನು ʼಮಲಗೋಕೆ ಬಾʼ ಎಂದು ಸಿಪಿಐ ಕರೆಯುತ್ತಾರೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೊಂದ ಮಹಿಳೆ, ಅಲ್ಲಿಂದಲೇ ಈ ಬಗ್ಗೆ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.
ಮಹಿಳಾ ಪೊಲೀಸರಿಲ್ಲದೆ ನನ್ನನ್ನು ಬಂಧಿಸಿ ಅವಮಾನ ಮಾಡಿದ್ದಾರೆ. ಪುರುಷ ಪೊಲೀಸರನ್ನು ಆಗಾಗ ಮನೆ ಬಳಿ ಕಳುಹಿಸಿ ಕಿರುಕುಳ, ಅವಮಾನ ನೀಡುತ್ತಿದ್ದಾರೆ. ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದಾರೆ. ನನ್ನ ಮೇಲೆ ವೇಶ್ಯಾವಾಟಿಕೆ ಕೇಸ್, ನನ್ನ ಗಂಡನ ವಿರುದ್ಧ ರೌಡಿಶೀಟ್ ತೆರೆಯುವುದಾಗಿ ಬೆದರಿಸುತ್ತಿದ್ದಾರೆ. ನಮ್ಮಂತ ಹೆಣ್ಣು ಮಕ್ಕಳಿಗೆ ರಕ್ಷಣೆ ಕೊಡಿ ಎಂದು ಮಹಿಳೆ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ.