ಬೆಂಗಳೂರಿನ ಪರಪ್ಪರ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋ ವೈರಲ್ ಆದ ಬೆನ್ನಲ್ಲೇ ನಟ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ. ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲಿನಲ್ಲಿರುವ ದರ್ಶನ್ ಅವರನ್ನು ಸದ್ಯ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗಿದೆ.
ಇವರಷ್ಟೇ ಅಲ್ಲದೇ ದರ್ಶನ್ ಗ್ಯಾಂಗ್ನ ಇತರೆ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪ್ರಕರಣದಲ್ಲಿ ದರ್ಶನ್ ಸೇರಿ ಇತರ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದರು. ಈ ಮನವಿಯನ್ನು ವಿಚಾರಣೆ ಮಾಡಿದ ಕೋರ್ಟ್ ಆರೋಪಿಗಳನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಿ ಆದೇಶ ಹೊರಡಿಸಿದೆ.
ಬಳ್ಳಾರಿ ಜೈಲು ಹೇಗಿದೆ?
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಶಿಫ್ಟ್ ಆಗುತ್ತಿರುವ ಬಳ್ಳಾರಿ ಜೈಲು ಹದಿನಾರು ಎಕರೆಯಲ್ಲಿದೆ. ಅಲ್ಲದೇ ಬಿಗಿ ಭದ್ರತೆಯನ್ನೂ ಹೊಂದಿದೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಿರುವ ಬಗ್ಗೆ ಅಲ್ಲಿನ ಜೈಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅಧಿಕಾರಿಗಳು ಬಳ್ಳಾರಿ ಕಾರಾಗೃಹದ ವಿಶೇಷ ಭದ್ರತಾ ವಿಭಾಗದ ಸೆಲ್‌ನಲ್ಲಿ ದರ್ಶನ್‌ನ್ನು ಇರಿಸಲಿದ್ದಾರೆ. ದರ್ಶನ್‌ನನ್ನು ವಿಶೇಷ ಭದ್ರತಾ ವಿಭಾಗದ ಹದಿನೈದನೇ ಸೆಲ್‌ನಲ್ಲಿ ಇರಿಸಲಿದ್ದಾರೆ. ಈ ಜೈಲ್‌ನಲ್ಲಿ ಒಟ್ಟು ಹದಿನೈದು ಸೆಲ್‌ಗಳಿದ್ದು, ಜೈಲಾಧಿಕಾರಿಗಳು ದರ್ಶನ್‌ಗೆ ಕೊನೆಯ ಭಾಗದ ಸೆಲ್ ನೀಡಲಿದ್ದಾರೆ.
ದರ್ಶನ್ ಭದ್ರತೆಗೆ ಈಗಾಗಲೇ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಾಡಿವೋರ್ನ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಕಣ್ಗಾವಲಿರುವ ಸೆಲ್‌ನಲ್ಲಿ ದರ್ಶನ್ ಇರಲಿದ್ದಾರೆ. ಭದ್ರತೆಗೆ ನಿಯೋಜನೆಯಾಗುವ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಕಡ್ಡಾಯವಾಗಿರಲಿದೆ. ಬಳ್ಳಾರಿ ಜೈಲಿನಲ್ಲಿ ಸೂಪರ್ಡೆಂಟ್ ಸೇರಿ ಒಟ್ಟು ನೂರು ಮಂದಿ ಸಿಬ್ಬಂದಿ, ಅಧಿಕಾರಿಗಳಿದ್ದಾರೆ.
ಒಟ್ಟು 385 ಕೈದಿಗಳಿದ್ದು, ಹರ್ಷ ಮರ್ಡರ್ ಕೇಸ್ ಮತ್ತು ಪ್ರವೀಣ್ ಪೂಜಾರಿ ಮರ್ಡರ್ ಕೇಸ್ ಆರೋಪಿಗಳು ಬಳ್ಳಾರಿ ಜೈಲಲ್ಲಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಬಳ್ಳಾರಿ ಕೇಂದ್ರ ಕಾರಾಗೃಹ 800-1000 ಕೈದಿಗಳ ಸಾಮರ್ಥ್ಯ ಹೊಂದಿದೆ. ಸದ್ಯ ವಿಚಾರಣಾಧೀನ, ಸಜಾ ಸಂಬಂಧಿಗಳು ಸೇರಿ ಒಟ್ಟು 385 ಕೈದಿಗಳಿದ್ದಾರೆ.
ವಿಚಾರಣಾಧೀನ ಕೈದಿಗಳಿಗೆ 5 ಬ್ಲಾಕ್‌ಗಳಿವೆ. ಸಜಾಸಂಬಂಧಿಗಳಿಗೆ 200 ಪ್ರತ್ಯೇಕ ಸೆಲ್‌ಗಳಿವೆ. ಗಣ್ಯವ್ಯಕ್ತಿಗಳನ್ನು ಇರಿಸಲು ‘ಹೈ ಸೆಕ್ಯೂರಿಟಿ’ ಸೌಲಭ್ಯವುಳ್ಳ ಸೆಲ್‌ಗಳು ಕೂಡ ಇವೆ. ಈ ಸೆಲ್‌ಗಳು ನೀರು, ಶೌಚಾಲಯ ಸೌಲಭ್ಯ ಹೊಂದಿದೆ. ಸೆಲ್‌ನಲ್ಲಿದ್ದುಕೊಂಡೇ ಕೋರ್ಟ್ ಕಲಾಪ ವೀಕ್ಷಿಸಲು ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಯನ್ನು ಈ ಜೈಲು ಒಳಗೊಂಡಿದೆ.
1874ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕಿಚ್ಚು ದೇಶದಲ್ಲಿ ಪ್ರಭಲವಾಗಿತ್ತು. ಮುಂಚೂಣಿ ಹೋರಾಟ ತಡೆಯೋದೆ ಬ್ರಿಟಿಷ್ ಸರ್ಕಾರಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಅಂದು ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆಯ ಹೋರಾಟಗಾರಿಗೆ ಬಳ್ಳಾರಿ ಜೈಲೇ ಗತಿಯಾಗಿತ್ತು. ಹೀಗಾಗಿ 1874ರಲ್ಲಿ ಈ ಜೈಲನ್ನು ಬ್ರಿಟಿಷ್ ಸರ್ಕಾರ ನಿರ್ಮಿಸಿತು. ಸ್ವಾತಂತ್ರ್ಯ ಹೋರಾಟ ವೇಳೆ ಮೂರು ಕಠಿಣ ಕಾರಾಗೃಹಗಳಿದ್ದವು. ಆದರೆ ಬಳ್ಳಾರಿ ಸೆಂಟ್ರಲ್ ಜೈಲ್ ಎರಡನೇ ಮಹಾಯುದ್ಧಕ್ಕೂ ಮುನ್ನವೇ ಆರಂಭವಾದ ಕಾರಾಗೃಹವಾಗಿದೆ.
ಸ್ವಾತಂತ್ರ್ಯ ಸಂಗ್ರಾಮದ ವೇಳೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಕ್ಷಯ ರೋಗದ ಭೀತಿ ಎದುರಾಗಿತ್ತು. TB ನಿಯಂತ್ರಣಕ್ಕೆ ಬಳ್ಳಾರಿಯ TB ಸ್ಹಾನಿಟೋರಿಯಂ ಪ್ರದೇಶದಲ್ಲಿ ಮತ್ತೊಂದು ಪ್ರತ್ಯೇಕ ಜೈಲು ವ್ಯವಸ್ಥೆಯನ್ನು ಬ್ರಿಟಿಷ್ ಸರ್ಕಾರ ಅಂದು ಮಾಡಿತ್ತು. ಬ್ರಿಟಿಷರು ವೆಲ್ಲೆಸ್ಲಿ ಜೈಲನ್ನ ಕೂಡ ನಿರ್ಮಾಣ ಮಾಡಿದ್ದರು. ಕ್ಷಯ ರೋಗಕ್ಕೆ ತುತ್ತಾದ ಹೋರಾಟಗಾರಿಗೆ ಅಗತ್ಯ ಚಿಕಿತ್ಸೆ ಅಲ್ಲಿ ನೀಡಲಾಗುತ್ತಿತ್ತು.
ದರ್ಶನ್ ಶಿಫ್ಟ್ ಆಗುವ ಹಿನ್ನೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದಾರೆ. ಜೈಲಿನ ಎರಡು ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜೈಲಿನ ಅಧಿಕಾರಿಗಳು ಜಿಲ್ಲಾ ವರಿಷ್ಠಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ದರ್ಶನ್ ಅಭಿಮಾನಿಗಳು ಸೇರುವ ಸಾಧ್ಯತೆಯಿರುವ ಹಿನ್ನೆಲೆ ಹೆಚ್ಚಿನ ಸಿಬ್ಬಂದಿ ನಿಯೋಜನೆಗೂ ಯೋಜನೆ ರೂಪಿಸಲಾಗಿದೆ. ಜೈಲಿನ ಸುತ್ತ ಪೊಲೀಸ್ ಸಿಬ್ಬಂದಿ, ಗೃಹ ರಕ್ಷಕ ಸಿಬ್ಬಂದಿ ನಿಯೋಜಸಿಲು ಪ್ಲ್ಯಾನ್ ನಡೆದಿದೆ. ಮತ್ತೊಂದೆಡೆ ಅಂತಿಮ ಹಂತದ ವಿವಿಐಪಿ ಸೆಲ್ ಪರಿಶೀಲನೆ ಹಾಗೂ ಜೈಲಿನ ಸುತ್ತ ಇರುವ ಸಿಸಿ ಕ್ಯಾಮೆರಾಗಳ ವರ್ಕ್ ಕಂಡೀಷನ್ ಪರಿಶೀಲನೆ ಕೂಡ ನಡೆದಿದೆ.