ಗೌರಿ ಗಣೇಶ ಹಬ್ಬಕ್ಕೆ ಇನ್ನು 7 ದಿನ ಬಾಕಿ! ಪೊಲೀಸ್ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ

Share to all

ಬೆಂಗಳೂರು: ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಆಚರಣೆಗೆ ಸಿಲಿಕಾನ್ ಸಿಟಿ ಸಜ್ಜಾಗುತ್ತಿದೆ. ಹೀಗಾಗಿ ಈ ವೇಳೆ ಯಾವುದೇ ರೀತಿಯ ಗೊಂದಲ ಮತ್ತು ಅವ್ಯವಸ್ಥೆಗೆ ಎಡೆ ಮಾಡಿಕೊಡದೆ ಇರಲು ಬಿಬಿಎಂಪಿ  ನಿರ್ಧರಿಸಿದ್ದು, ಮುನ್ನೆಚ್ಚರಿಕಾ ಕ್ರಮಗಳ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದೆ.

ಈ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿರುವ ಪೊಲೀಸ್ ಇಲಾಖೆ, ಪ್ರತಿಷ್ಠಾಪನೆಗೂ ಮುನ್ನ ಸಂಬಂಧಪಟ್ಟವರ ಅನುಮತಿ ಪಡೆಯಬೇಕು. ಸಾರ್ವಜನಿಕರಿಗೆ ವಾಹನ ಸವಾರರಿಗೆ ತೊಂದರೆಯಾಗಬಾರದು. 63 ಜನ ನೋಡಲ್ ಅಧಿಕಾರಿಗಳು ನಗರದಾದ್ಯಂತ ಕಾರ್ಯನಿರ್ವಹಿಸಲಿದ್ದಾರೆ. ಬಲವಂತವಾಗಿ ಚಂದ ಎತ್ತುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರ ಗಮನಕ್ಕೆ ಬಂದರೆ ನಮ್ಮ ಗಮನಕ್ಕೆ ತರಬೇಕು ಎಂದು ತಿಳಿಸಿದೆ.

ಮಾರ್ಗಸೂಚಿಯಲ್ಲಿ ಏನಿದೆ?
ಗಣೇಶ ಪ್ರತಿಷ್ಠಾಪನೆಗೆ ಶಾಮಿಯಾನ ಹಾಕಲು ಬಿಬಿಎಂಪಿ (BBMP) ಅನುಮತಿ ಪಡೆಯುವುದು ಕಡ್ಡಾಯ. ವಿವಾದಿತ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಂತಿಲ್ಲ. ಫ್ಲೆಕ್ಸ್ ಮತ್ತು ಬ್ಯಾನರ್ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ಬಿಬಿಎಂಪಿ ನಿಯಮ ಪಾಲಿಸಬೇಕು. ಪಿಒಪಿ ಗಣೇಶ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕ್ರಮ ತೆಗೆದುಕೊಳ್ಳುತ್ತಾರೆ. ಇಬ್ಬರು ಆಯೋಜಕರು ಗಣೇಶ ಕೂರಿಸುವ ಸ್ಥಳದಲ್ಲಿ ಇರಬೇಕು.

ಅಗ್ನಿಶಾಮಕ ದಳದವರ ಸಹಾಯ ಪಡೆಯಬೇಕು ಮತ್ತು ಬೆಳಕಿನ ವ್ಯವಸ್ಥೆ ಇರಬೇಕು. ಯಾವುದೇ ರೀತಿಯ ನೂಕು ನುಗ್ಗಲಿಗೆ ಅವಕಾಶ ಮಾಡಿಕೊಡಬಾರದು. ಮನರಂಜನೆ ಕಾರ್ಯಕ್ರಮಕ್ಕೆ ಮೊದಲೇ ಅನುಮತಿ ಪಡೆಯಬೇಕು. ಮನರಂಜನಾ ಕಾರ್ಯಕ್ರಮಕ್ಕೆ ರಾತ್ರಿ 10ರ ವರೆಗೆ ಮಾತ್ರ ಅವಕಾಶ. ಧ್ವನಿವರ್ಧಕಗಳಿಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಅವಕಾಶ. ಯಾವುದೇ ಡಿಜೆ ಸೌಂಡ್ ಸಿಸ್ಟಮ್‌ಗೆ ಯಾವ ಸಮಯದಲ್ಲೂ ಅವಕಾಶ ಇಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಸಂಚಾರ ಒತ್ತಡವಿರುವ ರಸ್ತೆಗಳಲ್ಲಿ ಗಣೇಶ ಪ್ರತಿಷ್ಠಾಪಿಸುವಂತಿಲ್ಲ. ನಿಗದಿ ಪಡಿಸಿದ ಮಾರ್ಗದಲ್ಲೇ ಗಣೇಶ ವಿಸರ್ಜನಾ ಮೆರವಣಿಗೆ ತೆರಳಬೇಕು. ಪೂರ್ವನಿಯೋಜಿತ ವಿಸರ್ಜನಾ ಸ್ಥಳದಲ್ಲೇ ಗಣೇಶ ವಿಸರ್ಜಿಸಬೇಕು. 21 ರಂದು ನಡೆದ ಸಭೆಯಲ್ಲಿ ಈ ಎಲ್ಲಾ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯ ಗೈಡ್‌ಲೈನ್ ನಲ್ಲಿ ತಿಳಿಸಲಾಗಿದೆ.


Share to all

You May Also Like

More From Author