ಬೆಂಗಳೂರು: ನಿತ್ಯ ಒಬ್ಬೊಬ್ಬರು ಸಿಎಂ ಸ್ಥಾನದ ಮೇಲೆ ಕಲರ್ ಕಲರ್ ಟವಲ್ ಹಾಕಿ ಹೋಗುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ರಸ್ತೆಗಳು ಹದಗೆಟ್ಟಿವೆ. ಸರ್ಕಾರ 5 ಗ್ಯಾರಂಟಿ ಜೊತೆಗೆ ಸುಲಲಿತವಾಗಿ ರಸ್ತೆಯಲ್ಲಿ ಓಡಾಡೋ ಗ್ಯಾರಂಟಿ ಕೊಡಬೇಕು. ಈ ಸರ್ಕಾರ ಕೋಮಾ ಸ್ಥಿತಿಗೆ ಹೋಗಿದೆ. ನಿತ್ಯ ಒಬ್ಬೊಬ್ಬರು ಸಿಎಂ ಸ್ಥಾನದ ಮೇಲೆ ಕಲರ್ ಕಲರ್ ಟವಲ್ ಹಾಕಿ ಹೋಗುತ್ತಿದ್ದಾರೆ ವ್ಯಂಗ್ಯವಾಡಿದರು.
ಜಮೀರ್, ದೇಶಪಾಂಡೆ, ಪರಮೇಶ್ವರ್, ಜಾರಕಿಹೋಳಿ ಒಂದೊಂದು ರೀತಿ ಸಿಎಂ ಸ್ಥಾನದ ಮೇಲೆ ಟವಲ್ ಹಾಕುತ್ತಿದ್ದಾರೆ. ಮುಡಾ ಎಂಬ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಮ್ಯೂಸಿಕ್ ನಿಂತ ಕೂಡಲೇ ಸಿಎಂ ಸ್ಥಾನದ ಮೇಲೆ ಕೂತುಕೊಳ್ಳೋಕೆ ಟವಲ್ ಹಾಕುತ್ತಿದ್ದಾರೆ.
ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಕುಳಿತುಕೊಳ್ಳೋಣ ಎಂದು ಸಿದ್ಧರಾಗಿದ್ದಾರೆ. ಈ ಸರ್ಕಾರಕ್ಕೆ ಲಂಗು ಲಗಾಮು ಇಲ್ಲ ಎಂದು ವಾಗ್ದಾಳಿ ನಡೆಸಿದರು. ಅಂಗನವಾಡಿ ಕಟ್ಟಡಗಳು ಸರಿಯಿಲ್ಲ. ಅಂಗನವಾಡಿಯವರಿಗೆ ಕೊಡಲು ಸಂಬಳವಿಲ್ಲ. ಹೀಗಿದ್ದರೂ ರೀಲ್ಸ್ ಮಾಡಿ ಕಳಿಸಿ ಅಂತ ಸಚಿವರು ಹೇಳುತ್ತಿದ್ದಾರೆ ಅಂತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಕಿಡಿಕಾರಿದರು.