ಪಾಟ್ನಾ: ಬಿಹಾರದ ಸಮಸ್ತಿಪುರ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯರೊಬ್ಬರ ಮರ್ಮಾಂಗಕ್ಕೆ ನರ್ಸ್ ಬ್ಲೇಡ್ ಹಾಕಿ ಪಾರಾದ ಘಟನೆ ನಡೆದಿದೆ. ಈ ಘಟನೆ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದಿದ್ದು, ಡಾಕ್ಟರ್ ಹಾಗೂ ಆತನ ಸಹಚರರು ಮದ್ಯದ ನಶೆಯಲ್ಲಿದ್ದರು. ಸಂತ್ರಸ್ತೆ ನರ್ಸ್ ಕೆಲಸ ಮುಗಿಸಿ ಮನೆಗೆ ಹೊರಡುವ ವೇಳೆ ಡಾಕ್ಟರ್ ಹಾಗೂ ಆತನ ಸಹಚರರು ಅತ್ಯಾಚಾರವೆಸಗಲು ಮುಂದಾದರು.
ಆ ಸಂದರ್ಭದಲ್ಲಿ ತನ್ನ ಆತ್ಮರಕ್ಷಣೆ ಮಾಡಿಕೊಳ್ಳಲು ಆಕೆ ವೈದ್ಯರ ಖಾಸಗಿ ಅಂಗಕ್ಕೆ ಬ್ಲೇಡ್ನಿಂದ ಗಾಯ ಮಾಡಿ ಅಲ್ಲಿಂದ ತಪ್ಪಿಸಿಕೊಂಡು ಹೊರ ಬಂದರು. ನಂತರ ಆಸ್ಪತ್ರೆಯಿಂದ ಹೊರಬಂದು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಘಟನೆಯ ಬಗ್ಗೆ ಸಂತ್ರಸ್ತೆ ಹೇಳಿಕೆ ನೀಡಿರುವುದಾಗಿ ಸಮಸ್ತಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಪಿಒ) ಸಂಜಯ್ ಕುಮಾರ್ ಪಾಂಡೆ ಗುರುವಾರ ಮಾಧ್ಯಮಗಳ ಮುಂದೆ ಮಾಹಿತಿ ನೀಡಿದರು.
ಪೊಲೀಸರು ಕೂಡಲೇ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ರಕ್ಷಿಸಿ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ನಂತರ ಅಧಿಕಾರಿಗಳ ತಂಡವೊಂದು ಆಸ್ಪತ್ರೆಯ ಒಳಗೆ ಹೋಗಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.
ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸುವ ಮುನ್ನಾ ಡಾಕ್ಟರ್ ಹಾಗೂ ಆತನ ಸಹಚರರು ಸಿಸಿಟಿವಿ ಕ್ಯಾಮೆರಾ ಸ್ವಿಚ್ ಆಫ್ ಮಾಡಿದ್ದಾರೆ. ಒಳಗಡೆಯಿಂದ ಆಸ್ಪತ್ರೆಯನ್ನು ಲಾಕ್ ಮಾಡಿದ್ದರು. ಮಹಿಳೆ ಅಲ್ಲಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆ ನೀಡಿದ ಆಧಾರದ ಮೇಲೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳದಿಂದ ಬ್ಲೇಡ್ ಹಾಗೂ ಇತರೆ ಸಾಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.