ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಹುಬ್ಬಳ್ಳಿ:- ನವಲಗುಂದದ ನೀಲಮ್ಮನ ಕೆರೆ, ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಸೇರಿದಂತೆ ಜಿಲ್ಲೆಯ ಸುಮಾರು 80 ಕ್ಕೂ ಅಧಿಕ ಕೆರೆಗಳಿಗೆ ನೀರನ್ನು ತುಂಬಿಸಿಕೊಳ್ಳಲಾಗಿದೆ. ಮುಂದಿನ 4 ರಿಂದ 5 ತಿಂಗಳು ಯಾವುದೇ ರೀತಿಯ ಕುಡಿಯುವ ನೀರಿನ ಕೊರತೆಯಾಗುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದು. ಈಗಾಗಲೇ ಕೆಲವು ರೈತರು ಹಿಂಗಾರು ಬೆಳೆ ಬೆಳೆದಿದ್ದಾರೆ. ಹಿಂಗಾರು ಮಳೆ ಕೊರತೆಯಾದರೆ ಬೆಳೆ ಹಾನಿಯಾಗುವ ಸಂಭವವಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪರಿಹಾರ್ ಸಾಫ್ಟವೇರ್ ಮೂಲಕ ರೈತರಿಗೆ ಬೆಳೆ ಪರಿಹಾರವನ್ನು ಕೊಡಿಸಲಾಗುತ್ತಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಮುಂದಿನ ಒಂದುವರೆ ತಿಂಗಳಲ್ಲಿ ರೈತರಿಗೆ ಬೆಳೆ ಪರಿಹಾರವನ್ನು ವಿತರಿಸಲಾಗುತ್ತದೆ. ವಿಮಾ ಕಂಪನಿಗಳಿಂದ ಮಧ್ಯಂತರ ಪರಿಹಾರವನ್ನು ಕೊಡಿಸಲಾಗುವುದು. ನಿನ್ನೆಯಷ್ಟೇ ಅಣ್ಣಿಗೇರಿ ಪಟ್ಟಣಕ್ಕೆ ತೆರಳಿ ಖುದ್ದು ಪರಿಶೀಲನೆ ಮಾಡಿದ್ದೇನೆ. ಹಳ್ಳಿಗಳಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ನೀರು ಸರಬರಾಜು ಮಾಡುವ ಮುನ್ನ ನೀರನ್ನು ಪರೀಕ್ಷೆ ಮಾಡಿಸುವಂತೆ ತಿಳಿಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಸುಮಾರು 15 ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ ಎಂಬ ಮಾಹಿತಿ ದೊರೆತಿದೆ. ಸಣ್ಣ ಪುಟ್ಟ ಸಮಸ್ಯೆಗಳಿಂದ ಬಂದಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿ, ಮರುಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಹಾಗೂ ಬೊರೇವೆಲ್ ಮೂಲಕ ನೀರನ್ನು ಒದಗಿಸಲಾಗುವುದು. ಹಲವಾರು ಸಮಸ್ಯೆಗಳಿಂದ ರೈತರಿಗೆ ಸರಿಯಾದ ಸಮಯಕ್ಕೆ ವಿದ್ಯುತ್ ಒದಗಿಸುವಲ್ಲಿ ಅಡತಡೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ವಿತರಿಸಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಅನುದಾನದ ಕೊರತೆಯಿಂದ ವಿದ್ಯುತ್ ಬಿಲ್ ಬಾಕಿ ಉಳಿದಿವೆ. ಆಯಾ ಇಲಾಖೆಗಳಿಗೆ ಅನುದಾನ ಬಿಡುಗಡೆಯಾದ ಬಳಿಕ ಕೂಡಲೇ ವಿದ್ಯುತ್ ಬಿಲ್ ಭರಿಸಲಾಗುತ್ತದೆ ಎಂದರು.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್ ಮಾತನಾಡಿ, ಸರ್ಕಾರಿ ಕಚೇರಿಗಳಿಗೆ ಲೋಕಾಯುಕ್ತರು ಎಂದು ಹೇಳಿಕೊಂಡು ಅನಗತ್ಯ ಕರೆಗಳು ಬರುತ್ತಿವೆ. ಈ ಕುರಿತಂತೆ ಯಾರು ಕೂಡ ದೂರು ಕೊಟ್ಟಿರುವುದಿಲ್ಲ. ದೂರುಗಳು ದಾಖಲಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉದಯ ವಾರ್ತೆ ಹುಬ್ಬಳ್ಳಿ