ಫೈಸಲಾಬಾದ್ನಲ್ಲಿ ನಡೆದ ಚಾಂಪಿಯನ್ಸ್ ಒನ್ ಡೇ ಕಪ್ನ 7ನೇ ಪಂದ್ಯದಲ್ಲಿ ಬಾಬರ್ ಆಝಂ ಆಕರ್ಷಕ ಶತಕ ಬಾರಿಸಿ ಮಿಂಚಿದ್ದಾರೆ.ಶತಕದೊಂದಿಗೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಟಾಸ್ ಗೆದ್ದ ಸ್ಟಾಲಿನ್ಸ್ ತಂಡದ ನಾಯಕ ಮೊಹಮ್ಮದ್ ಹ್ಯಾರಿಸ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಶುರು ಮಾಡಿದ ಶಾನ್ ಮಸೂದ್ (34) ಹಾಗೂ ಯಾಸಿರ್ ಖಾನ್ (46) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ಎಚ್ಚರಿಕೆಯ ಬ್ಯಾಟಿಂಗ್ನೊಂದಿಗೆ ಇನಿಂಗ್ಸ್ ಕಟ್ಟಿದರು.
ಆಕರ್ಷಕ ಹೊಡೆತಗಳೊಂದಿಗೆ ಗಮನ ಸೆಳೆದ ಬಾಬರ್ ಆಝಂ 100 ಎಸೆತಗಳನ್ನು ಎದುರಿಸಿ 3 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 104 ರನ್ ಬಾರಿಸಿದರು. ಈ ಮೂಲಕ ಕಳೆದ ಕೆಲ ತಿಂಗಳಿಂದ ಕಳಪೆ ಫಾರ್ಮ್ನಲ್ಲಿದ್ದ ಪಾಕ್ ನಾಯಕ ಮತ್ತೆ ಲಯ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು. ವಿಶೇಷ ಎಂದರೆ ಈ ಶತಕದೊಂದಿಗೆ ಬಾಬರ್ ಆಝಂ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ಲೀಸ್ಟ್ ಎ ದಾಖಲೆಯನ್ನು ಸಹ ಮುರಿದರು.
ಲೀಸ್ಟ್ ಎ ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 30 ಶತಕಗಳನ್ನು ಬಾರಿಸಿದ ವಿಶ್ವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 199 ಇನಿಂಗ್ಸ್ಗಳಲ್ಲಿ 30 ಶತಕ ಸಿಡಿಸಿ ಈ ದಾಖಲೆ ಬರೆದಿದ್ದರು. ಅಲ್ಲದೆ ಲೀಸ್ಟ್ ಎ ಕ್ರಿಕೆಟ್ನಲ್ಲಿ 200 ಕ್ಕಿಂತ ಕಡಿಮೆ ಇನಿಂಗ್ಸ್ಗಳಲ್ಲಿ 30 ಶತಕ ಬಾರಿಸಿದ ವಿಶ್ವದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದರು.ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಬಾಬರ್ ಆಝಂ ಯಶಸ್ವಿಯಾಗಿದ್ದಾರೆ.