ಸಿದ್ದರಾಮಯ್ಯ ಪ್ರಾಸಿಕ್ಯೂಷನ್ ಭವಿಷ್ಯಕ್ಕೆ ಕ್ಷಣಗಣನೆ: ಮುಡಾ ಕೇಸ್ ತೀರ್ಪು ಪ್ರಕಟಿಸಲಿರೋ ಹೈಕೋರ್ಟ್

Share to all

ಬೆಂಗಳೂರು: ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಅಂತ್ಯವಾಗಿದ್ದು ಇಂದು ಹೈಕೋರ್ಟ್​ ತೀರ್ಪು ಪ್ರಕಟಿಸಲಿದೆ. ಸುದೀರ್ಘ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ನ ನ್ಯಾಯಧೀಶರಾದ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು 12 ಗಂಟೆಗೆ ತೀರ್ಪು ಪ್ರಕಟಿಸಿದ್ದು ಸಿಎಂ ಸಿದ್ದರಾಮಯ್ಯನವರ ಭವಿಷ್ಯ ಏನಾಗಲಿದೆ ಎನ್ನುವ ಕುತೂಹಲ ಮೂಡಿಸಿದೆ.

ಸುಪ್ರೀಂ ಕೋರ್ಟ್‌ ವಕೀಲ ಅಭಿಷೇಕ್‌ ಮನು ಸಿಂಘ್ವಿ ಸೇರಿದಂತೆ ಹಲವು ಹಿರಿಯ ವಕೀಲರು ಸಿದ್ದರಾಮಯ್ಯ ಪರ ವಾದ ಮಂಡಿಸಿದ್ದರೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದರು. ಅಲ್ಲದೇ ದೂರುದಾರರಾದ ಸ್ನೇಹಮಯಿ ಕೃಷ್ಣ ಮತ್ತು ಟಿಜೆ ಅಬ್ರಾಹಂ ಪರ ವಕೀಲರು ಸಹ ತಮ್ಮ ವಾದ ಮಂಡಿಸಿದ್ದರು. ಸೆಪ್ಟೆಂಬರ್ 12ರಂದು ಈ ಎಲ್ಲಾ ವಾದ ಪ್ರತಿವಾದ ಆಲಿಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರು ಆದೇಶವನ್ನು ಕಾಯ್ದಿರಿಸಿದ್ದರು.

ಮುಡಾ ವ್ಯಾಪ್ತಿಯಲ್ಲಿ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರ ಹೆಸರಿನಲ್ಲಿ ಒಟ್ಟು 1,14,100 ಚದರ ಅಡಿಯಷ್ಟು ಜಾಗವನ್ನು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಬದಲಾಗಿ ಮುಡಾದಿಂದ ಮೂರು ವರ್ಷಗಳ ಹಿಂದೆ (2021)ರಲ್ಲಿ 38,000 ಚದರ ಅಡಿಯ ಜಾಗವನ್ನು ವಿಜಯನಗರದಲ್ಲಿ ನೀಡಿತ್ತು. ಸಿಎಂ ಸಿದ್ದರಾಮಯ್ಯ ಅವರು ವೈಟ್‌ನರ್ ಬಳಸಿ ಅಕ್ರಮವಾಗಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ಜಾಗ ಬರೆಸಿಕೊಂಡಿದ್ದಾರೆ. ಅಕ್ರಮವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಈ ಸಂಬಂಧ ಇಬ್ರಾಹಿಂ ಎಂಬುವವರು ರಾಜ್ಯಪಾಲರ ಬಳಿ ತನಿಖೆಗೆ ಅನುಮತಿಸುವಂತೆ ಕೋರಿ ದೂರು ನೀಡಿದ್ದರು. ದೂರಿನ ಮೇರೆಗೆ ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದು, ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಯಿತು. ರಾಜ್ಯಪಾಲರು ತಮ್ಮ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ರದ್ದುಗೊಳಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.


Share to all

You May Also Like

More From Author