ಆಂಧ್ರ ಪ್ರದೇಶದ ಪ್ರಸಿದ್ಧ ತಿರುಪತಿ ಶ್ರೀ ವೆಂಕಟೇಶ್ವರ ದೇವಸ್ಥಾನದ ಲಡ್ಡು ಪ್ರಸಾದ ವಿವಾದವು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೌದು ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದವೆಂದರೆ ಅದರ ಸ್ವಾದವೇ ಬೇರೆ. ದೇಶ – ವಿದೇಶಗಳಿಂದಲೂ ತಿಮ್ಮಪ್ಪನ ಭಕ್ತರು ಈ ಪ್ರಸಾದವನ್ನು ಅನುಭವಿಸಲು ಬಯಸುತ್ತಾರೆ. ಅದೆಷ್ಟೋ ಜನ ಆನ್ಲೈನ್ ಮೂಲಕ ಕೂಡ ಇಲ್ಲಿಂದ ಲಡ್ಡುಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದೀಗ ವಿಶ್ವವಿಖ್ಯಾತ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದ ಕುರಿತು ವಾದ – ವಿವಾದಗಳು ನಡೆಯುತ್ತಿದೆ.
ಇದೀಗ ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪ ಬಳಕೆಯಾಗಿದೆ ಎಂಬ ಆರೋಪದ ಹಿನ್ನಲೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಿದೆ. ವಿಚಾರಣೆ ವೇಳೆ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳು ರಾಜಕೀಯದಿಂದ ಧರ್ಮವನ್ನು ದೂರವಿಡಬೇಕು ಎಂದು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು ಆಂಧ್ರಪ್ರದೇಶ ಸರ್ಕಾರ ಮತ್ತು ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಗೆ ಹಾಗೂ ಆಂಧ್ರ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಹಾಕಿತು. ಈ ವಿಷಯದ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿರುವಾಗ ಸಾರ್ವಜನಿಕ ಹೇಳಿಕೆ ನೀಡುವುದು ಏಕೆ? ಪತ್ರಿಕಾಗೋಷ್ಠಿ ನಡೆಸುವ ಅಗತ್ಯವೇನಿತ್ತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ನೀವು ಎಸ್ಐಟಿ ತನಿಖೆಗೆ ಆದೇಶಿಸಿದ್ದೀರಿ. ತನಿಖೆಯ ವರದಿ ಬರುವ ಮುನ್ನ, ಪತ್ರಿಕಾಗೋಷ್ಠಿ ನಡೆಸುವ ಅವಶ್ಯಕತೆ ಏನು? ನೀವು ಯಾವಾಗಲೂ ಅಂತಹದ್ದಕ್ಕಾಗಿ ಕಾಣಿಸಿಕೊಳ್ಳುತ್ತಿದ್ದೀರಿ ಎಂದು ನ್ಯಾಯಾಲಯ ಆಂಧ್ರ ಪ್ರದೇಶ ಸರ್ಕಾರದ ಪರ ವಕೀಲ ರೋಹಟಗಿಯವರಿಗೆ ಪ್ರಶ್ನಿಸಿತು.
ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಸಾಕ್ಷಿ ಏನು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಈ ಕುರಿತು ತಿರುಪತಿ ದೇವಸ್ಥಾನದ ಪರ ವಾದ ಮಂಡಿಸಿದ ವಕೀಲ ಸಿದ್ಧಾರ್ಥ್ ಲೂತ್ರಾ, `ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಪೀಠಕ್ಕೆ ತಿಳಿಸಿದರು. ಈ ವೇಳೆ ನೀವು `ಮಾಧ್ಯಮದ ಮುಂದೆ ಹೋಗುವ ಅಗತ್ಯವೇನಿತ್ತು?’ ನೀವು ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಕೋರ್ಟ್ ಎಚ್ಚರಿಕೆ ನೀಡಿತು.
ತುಪ್ಪದಲ್ಲಿ ಕಲಬೆರಕೆ ನಡೆದಿದೆ ಎನ್ನುವುದಕ್ಕೆ ಇಲ್ಲಿಯವರೆಗೆ ಯಾವುದೇ ಅಧಿಕೃತ ಸಾಕ್ಷಿ ಇಲ್ಲದೇ ಇರುವಾಗ ಸುದ್ದಿಗೋಷ್ಠಿ ನಡೆಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿತು. ತುಪ್ಪದಲ್ಲಿ ಕಲಬೆರಕೆ ಆಗಿದೆಯೇ ಎಂದು `ನೀವು ಎರಡನೇ ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು ಎಂದು ವಿವೇಕವಿಲ್ಲವೇ? ಎಂದು ಸರ್ಕಾರಕ್ಕೆ ನ್ಯಾಯಮೂರ್ತಿ ವಿಶ್ವನಾಥನ್ ಅವರು ಪ್ರಶ್ನಿಸಿದರು.