ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಬಂಧನವಾಗಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ಕೇಸ್ನಲ್ಲಿ ಎ2 ಆರೋಪಿ ಆಗಿರುವ ದಾಸ ಬೇಲ್ ಪಡೆದು ಹೊರಬರುವ ದಿನಕ್ಕಾಗಿ ಕಾಯ್ತಿದ್ರು. ಆದ್ರೆ ಮತ್ತೆ ದರ್ಶನ್ಗೆ ಜೈಲೇ ಗತಿ ಆಗಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ಜಾಮೀನು ಕೊಡಲು ನಿರಾಕರಿಸಿದೆ. ಇದರಿಂದ ದರ್ಶನ್ ಜೈಲಿನಲ್ಲೇ ಮುಂದುವರಿಯುವುದು ಅನಿವಾರ್ಯ ಆಗಿದೆ. ಅವರು ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಆದರೆ ಪ್ರಕರಣದ A13 ಆರೋಪಿ ದೀಪಕ್‌ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಅವರು ಜೂನ್ 11ರಂದು ಅರೆಸ್ಟ್ ಆದರು. ಆ ಬಳಿಕ ಅವರನ್ನು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಆದರೆ, ಅಲ್ಲಿ ಅವರು ಐಷಾರಾಮಿ ವ್ಯವಸ್ಥೆ ಪಡೆದ ಕಾರಣಕ್ಕೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಯಿತು. ಈಗ ಈ ತೀರ್ಪಿನಿಂದ ಅವರು ಬಳ್ಳಾರಿ ಜೈಲಲ್ಲೇ ಇರಬೇಕಾಗಿದೆ.