ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಆರೋಪಿ ದರ್ಶನ್ಗೆ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರಾಗಿದೆ. ವೈದ್ಯಕೀಯ ಚಿಕಿತ್ಸೆಗಾಗಿ ರಾಜ್ಯ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬೆಳಿಗ್ಗೆ 10:45ರ ವೇಳೆಗೆ ನ್ಯಾಯಮೂರ್ತಿಗಳು ಆದೇಶ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಬಳ್ಳಾರಿಗೆ ಜೈಲಿಗೆ ದರ್ಶನ್ ನೋಡಲು ಪತ್ನಿ ವಿಜಯಲಕ್ಷ್ಮಿ ಆಗಮಿಸಿದ್ದಾರೆ.
ಬೇಲ್ ಸಿಕ್ಕ ಬೆನ್ನಲ್ಲೇ ಜೈಲಿಗೆ ಆಗಮಿಸಿದ ಪತ್ನಿಯನ್ನು ನೋಡಲು ಹೈ ಸೆಕ್ಯೂರಿಟಿ ಸೆಲ್‌ನಿಂದ ತೀವ್ರ ಬೆನ್ನು ನೋವಿನಿಂದಲೇ, ದರ್ಶನ್ ಆಗಮಿಸಿದ್ದಾರೆ. ಜೈಲಿನ ಕೊಠಡಿಯಲ್ಲಿ ಕೆಲ ಕಾಲ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಪತ್ನಿ ಜೊತೆ ದರ್ಶನ್ ಚರ್ಚಿಸಿದ್ದಾರೆ.
ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ದರ್ಶನ್‌ರನ್ನು ಜೂನ್ 11ರಂದು ಬಂಧಿಸಿದ್ದು, ಬಳ್ಳಾರಿ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗಿ ಇಂದಿಗೆ 63 ದಿನ. ಅಗಷ್ಟ 29 ರಂದು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ವಿಜಯಲಕ್ಷ್ಮಿ 10 ಬಾರಿ ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್‌ರನ್ನು ಭೇಟಿ ಮಾಡಿದ್ದರು.
ಒಟ್ಟಾರೆ ದರ್ಶನ್ರ 131 ದಿನಗಳ ಜೈಲು ವಾಸ ಇಂದಿಗೆ ಮುಕ್ತಾಯ ಆಗಲಿದೆ. ಆರು ವಾರಗಳ ಕಾಲ ಅವರು ಜೈಲಿನಿಂದ ಹೊರಗೆ ಇರಲಿದ್ದಾರೆ. ಆರು ವಾರ ಆದ ಬಳಿಕ ಮತ್ತೆ ಜೈಲು ಸೇರುವ ಸಾಧ್ಯತೆ ಇದೆ. ಒಂದೊಮ್ಮೆ ಆರು ವಾರಗಳಲ್ಲಿ ಚಿಕಿತ್ಸೆ ಪೂರ್ಣವಾಗದೇ ಇದ್ದರೆ ಜಾಮೀನು ಅವಧಿ ವಿಸ್ತರಣೆಗೊಳ್ಳುವ ಸಾಧ್ಯತೆಯೂ ಸಹ ಇದೆ.