ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನಲ್ಲಿ ಬಹುಬೇಡಿಕೆಯ ನಟ. ನಾಯಕನಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೇ ಧನಂಜಯ್ ಟಾಲಿವುಡ್ ಮತ್ತು ಕಾಲಿವುಡ್‌ನಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಹೌದು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಡಾಲಿ ತನ್ನ ಅಭಿಮಾನಿಗಳಿಗೆ ಮದುವೆಯಾಗುವ ಬಗ್ಗೆ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಭಾವಿ ಪತ್ನಿ ಜೊತೆಗಿನ ಸುಂದರವಾದ ವಿಡಿಯೋ ಹಂಚಿಕೊಳ್ಳುವ ಮೂಲಕ ನಟ ಡಾಲಿ ಮದುವೆ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ನಟ ಡಾಲಿ ಧನಂಜಯ್ ಯಾರನ್ನು ಮದುವೆಯಾಗುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ನೆಲೆಸಿತ್ತು. ಅದರಲ್ಲೂ ಯುವತಿಯರಲ್ಲಿ ಈ ಕುತೂಹಲ ಜಾಸ್ತಿಯೇ ಇತ್ತು. ಚಿತ್ರರಂಗದವರಾ? ಅಥವಾ ಬೇರೆ ಕ್ಷೇತ್ರದವರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಹುಟ್ಟಿಕೊಂಡಿತ್ತು. ಆದರೀಗ ಈ ಎಲ್ಲಾ ಕುತೂಹಲಕ್ಕೆ ಡಾಲಿ ತೆರೆ ಎಳೆದಿದ್ದಾರೆ.ನಟ ಧನಂಜಯ್ ವೈದ್ಯೆಯನ್ನು ಕೈ ಹಿಡಿಯಲು ಮುಂದಾಗಿದ್ದಾರೆ. ಧನ್ಯತಾ ಎಂಬಾಕೆಯ ಜೊತೆಗೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅಂದಹಾಗೆಯೇ ಗೈನೋಕಾಲಾಜಿಸ್ಟ್ ಆಗಿರುವ ಧನ್ಯತಾ ಡಾಲಿ ಅನ್ನು ಕೈ ಹಿಡಿಯುತ್ತಿದ್ದಾರೆ.
ಡಾಲಿ ಮತ್ತು ಧನ್ಯತಾ ಇಬ್ಬರು ಅನೇಕ ವರ್ಷಗಳ ಪರಿಚಯ, ಈ ಪರಿಚಯ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರುತ್ತಿದ್ದಾರೆ. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿ. ಓದಿದ್ದು ಮೈಸೂರಿನಲ್ಲಿ. ಅರಸೀಕೆರೆ ಮೂಲದ ನಟ ಧನಂಜಯ ಕೂಡ ಓದಿದ್ದು ಮೈಸೂರಿನಲ್ಲಿ. ಈಗ ಇವರಿಬ್ಬರು ತಮ್ಮ ಪ್ರೀತಿಗೆ ಮೂರು ಗಂಟು ಬಿಗಿಯಲು ಮುಂದಾಗಿದ್ದಾರೆ.ಸದ್ಯ ಶೇರ್ ಮಾಡಿರುವ ವಿಡಿಯೋದಲ್ಲಿ ಡಾಲಿ ಜೋಡಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಕವನ ಹೇಳುತ್ತಾ ತನ್ನ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಅಂದಹಾಗೆಯೇ ಇಬ್ಬರ ಮದುವೆ ಫೆಬ್ರವರಿಯಲ್ಲಿ ನಡೆಯಲಿದೆ.