ಬಿಗ್ ಬಾಸ್ ಸೀಸನ್ 11 ನಾಲ್ಕು ವಾರಗಳು ಕಳೆದು 5 ನೇ ವಾರಕ್ಕೆ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಎಲ್ಲಾ ಸ್ಪರ್ಧಿಗಳು ಕೂಡ ಉತ್ತಮ ತಂತ್ರಗಾರಿಕೆಯಿಂದ ಆಟ ಆಡುತ್ತಿದ್ದಾರೆ. ಈ ಮೊದಲು ಸೈಲೆಂಟ್ ಆಗಿದ್ದ ಮೋಕ್ಷಿತಾ ಪೈ, ಧರ್ಮ ಕೀರ್ತಿರಾಜ್, ಹನುಮಂತ ಕೂಡ ಈಗ ಏಟಿಗೆ ತಿರುಗೇಟು ಕೊಟ್ಟು ಆಟ ಆಡುತ್ತಿದ್ದಾರೆ. ಬರೀ ತಂತ್ರಗಾರಿಕೆ ಮಾತ್ರವಲ್ಲದೇ ಟಾಸ್ಕ್ಗಳಲ್ಲಿ ಕೂಡ ಉತ್ತಮವಾಗಿ ಆಡಬೇಕು. ಅದಕ್ಕಾಗಿ ತಂಡಗಳನ್ನು ಮಾಡಬೇಕು. ಅ.31ರ ಎಪಿಸೋಡ್ನಲ್ಲಿ ಟೀಮ್ ಮಾಡುವಾಗ ಚೈತ್ರಾ ಕುಂದಾಪುರ ಅವರನ್ನು ಯಾರೂ ಕೂಡ ಆಯ್ಕೆ ಮಾಡಿಕೊಂಡಿಲ್ಲ.
ಹೊಸ ಟಾಸ್ಕ್ ಸಲುವಾಗಿ ಎರಡು ತಂಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಬಿಗ್ ಬಾಸ್ ಹೇಳಿದರು. ಭವ್ಯಾ ಮತ್ತು ಗೌತಮಿ ಜಾಧವ್ ಅವರು ಎರಡು ಟೀಮ್ಗಳನ್ನು ಆಯ್ಕೆ ಮಾಡಿಕೊಂಡರು. ಟೀಮ್ ಮಾಡುವಾಗ ಎಲ್ಲರೂ ಆಯ್ಕೆಯಾಗಿ ಕೊನೆಯಲ್ಲಿ ಉಳಿದುಕೊಂಡಿದ್ದು ಚೈತ್ರಾ ಕುಂದಾಪುರ! ಇನ್ನೇನು ಬೇರೆ ಆಪ್ಷನ್ ಇಲ್ಲದೇ ಅಂತಿಮವಾಗಿ ಗೌತಮಿಯ ಟೀಮ್ಗೆ ಚೈತ್ರಾ ಅವರ ಹೋಗಬೇಕಾಯಿತು.
ಹೊರಗಡೆ ಇದ್ದಾಗ ಮಾತುಗಾರಿಕೆಯಿಂದ ಚೈತ್ರಾ ಕುಂದಾಪುರ ಗುರುತಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಕೇವಲ ಮಾತು ಉಪಯೋಗಕ್ಕೆ ಬರುವುದಿಲ್ಲ. ‘ನನಗೆ ಮಾತನಾಡಲು ಬಿಟ್ಟರೆ ಬೇರೇನೋ ಗೊತ್ತಿಲ್ಲ’ ಎಂದು ಚೈತ್ರಾ ಅವರೇ ಕೆಲವು ಬಾರಿ ದೊಡ್ಮನೆಯಲ್ಲಿ ಹೇಳಿಕೊಂಡಿದ್ದುಂಟು. ಆದರೆ ಮಾತಿನಿಂದಲೇ ಅವರು ಹಿನ್ನಡೆ ಕೂಡ ಅನುಭವಿಸಿದ್ದಾರೆ. ‘ಅವರು ಬೇರೆಯವರ ಮಾತನ್ನು ಕೇಳಿಸಿಕೊಳ್ಳಲ್ಲ’ ಎಂಬ ಕಾರಣದಿಂದಲೇ ಅನೇಕರು ಚೈತ್ರಾ ಅವರನ್ನು ನಾಮಿನೇಟ್ ಮಾಡಿದ ಉದಾಹರಣೆ ಕೂಡ ಇದೆ.