ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ ಆರೋಪ ಹೊತ್ತಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ಇಂದು ನಡೆದಿದೆ. ಕೆಳ ಹಂತದ ಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ತಿರಸ್ಕಾರ ಗೊಂಡಿತ್ತು. ಈ ಕಾರಣಕ್ಕೆ ದರ್ಶನ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಿದ್ದಾರೆ. ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ 28ಕ್ಕೆ ಮುಂದೂಡಿಕೆ ಮಾಡಲಾಗಿದೆ.
ರೇಣುಕಾ ಸ್ವಾಮಿಯದ್ದು ಅಪಹರಣವೇ ಅಲ್ಲ ಎಂದು ಸಿವಿ ನಾಗೇಶ್ ವಾದ ಮಂಡಿಸಿದರು. ರೇಣುಕಾ ಸ್ವಾಮಿಯೇ ಬಾರ್ನಲ್ಲಿ ಬಿಲ್ ಕಟ್ಟಿದ್ದಾನೆ. ಅಪಹರಣಕ್ಕೆ ಒಳಗಾದ ವ್ಯಕ್ತಿ ಅಪಹರಣ ಮಾಡಿದವರಿಗೆ ಮದ್ಯ ಕೊಡಿಸುತ್ತಾನೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ದರ್ಶನ್ ಹಾಗೂ ಇತರರಿಗೆ ರೇಣುಕಾ ಸ್ವಾಮಿಯ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ವಾದಿಸಿದರು. ಆ ಬಳಿಕ ಸಂಜೆ ನಾಲ್ಕು ಗಂಟೆಗೆ ವಿಚಾರಣೆಯನ್ನು ಮುಂದೂಡಲಾಗಿತ್ತು.
ಸಂಜೆ ನಾಲ್ಕು ಗಂಟೆಗೆ ಮತ್ತೆ ವಾದ ಆರಂಭಿಸಿದ ದರ್ಶನ್ ಪರ ವಕೀಲ ಸಿವಿ ನಾಗೇಶ್, ವಾದ ಮಂಡನೆಯಲ್ಲಿ ದರ್ಶನ್ ಕೊಲೆ ಮಾಡಿಲ್ಲವೆಂದು, ರೇಣುಕಾ ಸ್ವಾಮಿಯ ಅಪಹರಣವೇ ಆಗಿಲ್ಲ ಎಂದು ವಾದ ಮಂಡಿಸಿದರು. ಅಲ್ಲದೆ ದರ್ಶನ್ ಅನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿರುವ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು. ಸಿವಿ ನಾಗೇಶ್ ಸತತ ವಾದ ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದ್ದಾರೆ.