ಹುಬ್ಬಳ್ಳಿ:- ನಾಳೆ ಸರಳವಾಗಿ ಯಾರನ್ನೂ ಕರೆಯದೇ ನಾಮಪತ್ರ ಸಲ್ಲಿಸುವುದಾಗಿ ಶಿರಹಟ್ಟಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ನಾಳೆ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಶಾಂತಿನಗರದಲ್ಲಿನ ಸೂಪಿಸಂತರ ಸಂಘದ ರಾಜ್ಯಾಧ್ಯಕ್ಷರಾದ ಪೀರ್ ಸೈಯದ್ ಅಹಿಮ್ಮದ್ ರಜಾ ಸರ್ ಖಾಜಿ ಇವರ ಮನೆಗೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳಿದರು.
ಅಲ್ಲದೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಜೊತೆಗೆ ಮಾತನಾಡಿದ್ದು ನಿಜ. ಆದರೆ ಅದು ಅವರ ಪಕ್ಷದ ಕರ್ತವ್ಯದ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ನಮ್ಮ ನಿಲುವು ಸ್ಪಷ್ಟವಾಗಿದೆ. ಈ ಚುನಾವಣೆಯಲ್ಲಿ ನಾವು ದುಸ್ಸಾಹಸ ಮಾಡುತ್ತಿಲ್ಲ, ಸಾಹಸ ಮಾಡುತ್ತಿದ್ದೇವೆ. ಇದು ಧರ್ಮ ಯುದ್ದ, ಸ್ವಾಭಿಮಾನದ ಚುನಾವಣೆ ಆಗಿದೆ. ಕಣದಿಂದ ಯಾವುದೇ ಕಾರಣಕ್ಕೂ ಹಿಂದಕ್ಕೆ ಸರಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ತಿಳಿಸಿದರು.
ಏ.18 ಕ್ಕೆ ನಾಮಪತ್ರ ಸಲ್ಲಿಕೆ: ಏಪ್ರಿಲ್ 18 ರಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದ್ದು, ರಾಜಕೀಯ ಪಕ್ಷಗಳಂತೆ ನಾವು ಶಕ್ತ ಪ್ರದರ್ಶನ ಮಾಡುವಂತಹ ಹುಚ್ಚು ಸಾಹಸ ಮಾಡುವುದಿಲ್ಲ, ಟೌನ್ ಹಾಲ್’ದಿಂದ ಜಿಲ್ಲಾಧಿಕಾರಿ ಕಚೇರಿಯವರಿಗೆ ಯಾತ್ರೆಯ ಮೂಲಕ ನಾಮಪತ್ರ ಸಲ್ಲಿಕೆ ಮಾಡಲಿದ್ದೇವೆ ಎಂದರು.
ಯಾವ ರಾಜಕೀಯ ನಾಯಕರು, ಮಠಾಧೀಶರುಗಳನ್ನು ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸ್ಪಷ್ಟಪಡಿಸಿದ ಸ್ವಾಮೀಜಿ ಬಡವರು, ಕೂಲಿಕಾರರು ತಮ್ಮ ಕೆಲಸ ವಗೈರೆಗಳನ್ನು ಬಿಟ್ಟು ಬರಬಾರದು ಎಂದು ಮನವಿ ಮಾಡಿದರು.
ನಾಮಪತ್ರ ಸಲ್ಲಿಸುವ ವೇಳೆ ನಿರೀಕ್ಷೆಗೂ ಮೀರಿ ಜನರು ಬರುವ ವಿಶ್ವಾಸವಿದೆ. ಮುಸ್ಲಿಂ ಸಮುದಾಯ, ರೈತ ಸಂಘ, ಮಹಿಳೆಯರ ಪ್ರತಿನಿಧಿಯೊಬ್ಬರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿರುತ್ತಾರೆ ಎಂದರು.
ನಾಮಪತ್ರ ಸಲ್ಲಿಕೆಗೆ ಮುಹೂರ್ತ ನೋಡುವುದಿಲ್ಲ, ಸರ್ಕಾರದ ಸಮಯವೇ ನಮಗೆ ಮೂಹೂರ್ತ ಎಂದರು.