ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ಅವರನ್ನು ಇತ್ತೀಚೆಗೆ ವಿನೋದ್ ರಾಜ್ ಭೇಟಿ ಮಾಡಿದರು. ಅದಾದ ಕೆಲ ದಿನಗಳಲ್ಲೇ ರೇಣುಕಾಸ್ವಾಮಿ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳಿ 1 ಲಕ್ಷ ನೆರವು ಕೂಡ ಕೊಟ್ಟಿದ್ದರು. ಇದೀಗ ಆರೋಪವೊಂದು ಕೇಳಿ ಬಂದಿದ್ದು, ದರ್ಶನ್ ಪರ ರಾಜಿ ಸಂಧಾನಕ್ಕೆ ವಿನೋದ್ ರಾಜ್ ಹೋಗಿದ್ರಾ ಎಂಬ ಮಾತು ಕೇಳಿ ಬಂದಿದೆ.
ಇದಕ್ಕೆ ಉತ್ತರಿಸಿರುವ ವಿನೋದ್ ರಾಜ್, ನಾನು ನಾಲ್ಕೈದು ದಿನಗಳ ಹಿಂದೆ ದರ್ಶನ್ ಅವರನ್ನ ಜೈಲಿನಲ್ಲಿ ಭೇಟಿಯಾಗಿದ್ದೆ. ದರ್ಶನ್ ಭೇಟಿ ಮಾಡಿದ ನಂತರ ನಾನು ರೇಣುಕಾ ಸ್ವಾಮಿ ಮನೆಗೆ ಭೇಟಿ ಮಾಡಿದ್ದೆ ಎಂದಿದ್ದಾರೆ. ದರ್ಶನ್ ಕಲಾವಿದರು ಹಾಗೂ ನನಗೆ ಪರಿಚಯ ಇದ್ದಾರೆ. ಹೀಗಾಗಿ ನಾನು ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿ ಬಂದೆ. ರೇಣುಕಾ ಸ್ವಾಮಿ ಮಡದಿ ಗರ್ಭಿಣಿ ಇದ್ದಾರೆ ಹುಟ್ಟೋ ಮಗುವಿಗೆ ಏನಾದರೂ ಒಳ್ಳೆಯದು ಮಾಡಬೇಕು ಅನ್ನೋ ಉದ್ದೇಶದಿಂದ ಚಿತ್ರದುರ್ಗಕ್ಕೆ ಹೋಗಿದ್ದೆ ಎಂದಿದ್ದಾರೆ. ನಾನು ಯಾವುದೇ ರಾಜಿ ಸಂಧಾನಕ್ಕಾಗಿ ನಾನು ಹೋಗಿಲ್ಲ. ಅಂತಹ ಕೆಲಸವನ್ನು ನಾನು ಮಾಡೊದಿಲ್ಲ ಎಂದು ವಿನೋದ್ ರಾಜ್ ಹೇಳಿದ್ದಾರೆ.
ರೇಣುಕಾಸ್ವಾಮಿ ಪೋಷಕರ ಭೇಟಿ ನಂತರ ವಿನೋದ್ ರಾಜ್ ಏನಂದ್ರು?
ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ವಿನೋದ್ ರಾಜ್, ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿದ್ದೇನೆ. ಮನೆಗೆ ಆಧಾರವಾಗಿದ್ದ ಮಗನ ಕಳೆದುಕೊಂಡು ನೋವಿನಲ್ಲಿದ್ದಾರೆ, ಇಂತಹ ಘಟನೆ ನಡೆದು ಹೋಗಬಾರದಿತ್ತು. ಒಂದು ಜೀವ ತೆಗೆಯಲು ಯಾರಿಗೂ ಹಕ್ಕು ಇಲ್ಲ. ಮಾನವೀಯತೆ ಎಲ್ಲಿ ಹೋಗಿದೆ ಅನ್ನೋದು ಪ್ರಶ್ನೆ, ಕಲಾವಿದರನ್ನು ನೋಡಿ ಜನ ಅನುಕರಣೆ ಮಾಡ್ತಾರೆ. ಕಲಾವಿದರು ಒಳ್ಳೆಯದನ್ನೇ ಜನರಿಗೆ ಕೊಡುವ ಕೆಲಸ ಮಾಡ್ಬೇಕು. ಕಲಾವಿದರು ಎಂಬ ಪಟ್ಟ ಕೊಟ್ಟು ಜವಾಬ್ದಾರಿ ಕೊಟ್ಟಿದ್ದಾರೆ ಜನ, ನಾವು ಏನು ಮಾಡಿದರೂ ಜನ ನೋಡ್ತಾರೆ. ನಾವು ವಿವೇಕದಿಂದ ಮಾತಾಡಬೇಕು, ಒಳ್ಳೆ ಕೆಲಸ ಮಾಡ್ಬೇಕು ಎಂದು ಹೇಳಿದರು.