ತಿರುವನಂತಪುರಂ: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಿಂದ ಮೃತರ ಸಂಖ್ಯೆ 350 ದಾಟಿದ್ದು, ಇನ್ನೂ ನೂರಾರು ಮಂದಿ ಪತ್ತೆಯಾಗಬೇಕಿದೆ̤ ಹೀಗಿರುವಾಗ ಸಂತ್ರಸ್ತರ ಸಹಾಯಕ್ಕೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮುಂದಾಗಿದ್ದಾರೆ. ವಯನಾಡು ಭೂಕುಸಿತ ದುರಂತದ ನಿಮಿತ್ತ ಸಂಕಷ್ಟದಲ್ಲಿರುವವರಿಗೆ ಈಗ ಅಲ್ಲು ಅರ್ಜುನ್ 25 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಕುರಿತು ಸ್ವತಃ ನಟ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಕೇರಳದ ಜನರು ನನಗೆ ಯಾವಾಗಲೂ ತುಂಬಾ ಪ್ರೀತಿಯನ್ನು ನೀಡಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಕೇರಳ ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಲು ಬಯಸುತ್ತೇನೆ. ನಿಮ್ಮೆಲ್ಲರ ಸುರಕ್ಷೆ ಮತ್ತು ಶಕ್ತಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅಲ್ಲು ಅರ್ಜುನ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈಗ ನಟನ ನಡೆಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ.