ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸದ್ಯ ಪ್ರಕರಣದಲ್ಲಿ A2 ಆಗಿರೋ ದರ್ಶನ್ ಅವರು ಆರೋಪಿ ನಂ.1 ಆಗೋ ಸಾಧ್ಯತೆ ಹೆಚ್ಚಾಗಿದೆ. ಪೊಲೀಸರ ತನಿಖೆ ವೇಳೆ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರೋ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ. ಇದು ಕೊಲೆ ಕೇಸ್‌ಗೆ ಸದ್ಯ ರೋಚಕ ಟ್ವಿಸ್ಟ್ ಕೊಟ್ಟಿದೆ.
ಇನ್ನು ದರ್ಶನ್ ಮತ್ತು ಗ್ಯಾಂಗ್ ಸದಸ್ಯರ ವಿರುದ್ಧ ಪ್ರಮುಖ ಸಾಕ್ಷಿಯಾಗಿರುವ ಚಿಕ್ಕಣ್ಣ ಸೆಕ್ಷನ್ ಸಿಆರ್‌ಪಿಸಿ 164ರ ಅಡಿಯಲ್ಲಿ ಜಡ್ಜ್ ಎದುರು ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿದ ನಂತರ ದರ್ಶನ್ ಅವರನ್ನು ಭೇಟಿ ಮಾಡಿದ್ದರು.
ಸಾಧಾರಣವಾಗಿ ತನಿಖಾ ಹಂತದಲ್ಲಿರುವಾಗಲೇ ಸಾಕ್ಷಿಯಾದ ವ್ಯಕ್ತಿ ಜೈಲಿನಲ್ಲಿ (Jail) ಆರೋಪಿಯನ್ನು ಭೇಟಿ ಮಾಡುವುದಿಲ್ಲ. ಆದರೆ ತನಿಖಾ ಹಂತದಲ್ಲಿರುವಾಗಲೇ ಚಿಕ್ಕಣ್ಣ ದರ್ಶನ್ ಅವರನ್ನು ಭೇಟಿ ಮಾಡಿದ್ದಕ್ಕೆ ಎಸ್‌ಐಟಿ ಶೀಘ್ರವೇ ನೋಟಿಸ್ ನೀಡುವ ಸಾಧ್ಯತೆಯಿದೆ.
ಯಾವ ಉದ್ದೇಶಕ್ಕೆ ಆರೋಪಿಯನ್ನು ಭೇಟಿಯಾಗಿದ್ದೀರಿ? ಆರೋಪಿ ಬಳಿ ಏನು ಮಾತನಾಡಿದ್ದೀರಿ ಎಂದು ಚಿಕ್ಕಣ್ಣ ಅವರನ್ನು ಪೊಲೀಸರು ಪ್ರಶ್ನಿಸುವ ಸಾಧ್ಯತೆಯಿದೆ. ಇದರ ಜೊತೆಯಲ್ಲಿ ಸಾಕ್ಷಿ-ಆರೋಪಿ ಭೇಟಿ ಬಗ್ಗೆ ಜೈಲಾಧಿಕಾರಿಗಳ ಬಳಿಯೂ ಮಾಹಿತಿ ಪಡೆಯಬಹುದು.
ಅಷ್ಟೇ ಅಲ್ಲದೇ ಸಾಕ್ಷಿಗಳ ಭೇಟಿಯನ್ನ ತಡೆಯಲು ನ್ಯಾಯಾಲಯದಲ್ಲಿ ಎಸ್‌ಐಟಿ ಮನವಿ ಮಾಡುವ ಸಾಧ್ಯತೆಯಿದೆ. ಜೂನ್ 8 ರಂದು ಸ್ಟೋನಿ ಬ್ರೂಕ್ ಪಬ್‌ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ದರ್ಶನ್ ಜೊತೆ ಚಿಕ್ಕಣ್ಣ ಭಾಗಿಯಾಗಿದ್ದರು. ಪಾರ್ಟಿ ಬಳಿಕ ದರ್ಶನ್ ಪಟ್ಟಣಗೆರೆ ಶೆಡ್‌ಗೆ ಹೋಗಿದ್ದರೆ ಚಿಕ್ಕಣ್ಣ ಮನೆಗೆ ತೆರಳಿದ್ದರು.
ಚಿಕ್ಕಣ್ಣ ಪ್ರಮುಖ ಸಾಕ್ಷಿ ಹೇಗೆ?
ಯಾವುದೇ ಪ್ರಕರಣದಲ್ಲಿ ಪೊಲೀಸರು ಠಾಣೆಗೆ ಕರೆಸಿ ಸಾಕ್ಷಿಗಳನ್ನು ವಿಚಾರಣೆ ನಡೆಸುತ್ತಾರೆ. ಆದರೆ ಪ್ರಕರಣ ಒಂದರಲ್ಲಿ ಆ ವ್ಯಕ್ತಿಯ ಹೇಳಿಕೆ ಪ್ರಮುಖ ಸಾಕ್ಷಿ ಆಗಲಿದೆ ಎಂದಾದರೆ ಮಾತ್ರ ಆ ವ್ಯಕ್ತಿಯನ್ನು ಜಡ್ಜ್ ಮುಂದೆ ಹಾಜರು ಪಡಿಸಿ ಹೇಳಿಕೆ ನೀಡಲಾಗುತ್ತದೆ.
ನಟ ಚಿಕ್ಕಣ್ಣ ಅವರ ಹೇಳಿಕೆಯನ್ನು ಸಿಆರ್‌ಪಿಸಿ (CrPC) 164ರ ಅಡಿಯಲ್ಲಿ ನ್ಯಾಯಾಧೀಶರ ಎದುರು ಪೊಲೀಸರು ದಾಖಲಿಸಿದ್ದಾರೆ. ಚಿಕ್ಕಣ್ಣ ಅವರ ಹೇಳಿಕೆಯನ್ನು ಪ್ರಮುಖ ಸಾಕ್ಷಿಯನ್ನಾಗಿ ಪರಿಗಣಿಸಲೆಂದೇ ಪೊಲೀಸರು ಜಡ್ಜ್ ಮುಂದೆ ಹೇಳಿಕೆ ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ.