ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಸದ್ಯ ದರ್ಶನ್ ಅವರು ‘ಎ2’ ಆರೋಪಿ ಆಗಿದ್ದಾರೆ. ಅವರನ್ನು ‘ಎ1’ ಆರೋಪಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದಲ್ಲದೆ ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ವಿರುದ್ಧ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ದರ್ಶನ್ ಹಾಗೂ ಅವರ ಗ್ಯಾಂಗ್ ವಿರುದ್ಧ 3ರಿಂದ 4 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಮತ್ತು ಗ್ಯಾಂಗ್ ರೇಣುಕಾ ಸ್ವಾಮಿ ಅವರನ್ನು ಕರೆತಂದಾಗಿನಿಂದ ನಾಲ್ವರ ಸರೆಂಡರ್ ಆಗುವವರೆಗಿನ ವೃತ್ತಾಂತವನ್ನು ತೋರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವರದಿ ಆಗಿದೆ.
ದರ್ಶನ್ ಖ್ಯಾತ ಸೆಲೆಬ್ರಿಟಿ. ಹೀಗಾಗಿ, ಇದು ಹೈ ಪ್ರಾಫೈಲ್ ಕೇಸ್ ಎನಿಸಿಕೊಂಡಿದೆ. ಹೀಗಾಗಿ, ಘಟನೆಯ ಕುರಿತು ಹಲವು ಸಾಕ್ಷ್ಯಧಾರಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಹಲವು ಆಯಾಮಗಳಲ್ಲಿ ಪ್ರಕರಣದ ಸೂಕ್ಷ್ಮತೆ ಅರಿತು ಪೊಲೀಸರು ಕೆಲಸ ಮಾಡಿದ್ದಾರೆ.
ಅಂದಹಾಗೆ ಜೂನ್ 11 ರಂದು ಬೆಳ್ಳಂಬೆಳಿಗ್ಗೆ ನಟ ದರ್ಶನ್ ಬಂಧನವಾಗಿತ್ತು. ಮೈಸೂರಿನಲ್ಲಿ ದರ್ಶನ್ ಅನ್ನು ಪೊಲೀಸರು ಬಂಧಿಸಲು ಹೋದಾಗ ಪೊಲೀಸರ ಮುಂದೆ ದರ್ಶನ್, ‘ನನ್ನ ಜೊತೆಗಿದ್ದ ಹುಡುಗರಿಂದ ನಾನು ಹಾಳಾದೆ’ ಎಂದು ಹೇಳಿದರಂತೆ. ಅದಾದ ಬಳಿಕ ನಟಿ ಪವಿತ್ರಾ ಗೌಡ ಅವರನ್ನು ಬಂಧಿಸಲು ಯತ್ನಿಸಿ ಅವರ ಮನೆ ಹಾಗೂ ಇನ್ನೊಂದು ಸ್ಥಳಕ್ಕೆ ಪೊಲೀಸರು ಹೋಗಿದ್ದಾರೆ ಆದರೆ ಎರಡೂ ಸ್ಥಳದಲ್ಲಿ ಪವಿತ್ರಾ ಇರಲಿಲ್ಲ. ಕೊನೆಗೆ ದರ್ಶನ್ ಮೊಬೈಲ್ ನಿಂದಲೇ ಪವಿತ್ರಾಗೆ ಕರೆ ಮಾಡಿಸಿದ ಪೊಲೀಸರು ಪವಿತ್ರಾರನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಕರೆಸಿಕೊಂಡು ಬಂಧಿಸಿದ್ದಾರೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದಾಗ ಆರಂಭದ ಒಂದೆರಡು ವಾರ ಬಹಳ ಸಮಸ್ಯೆ ಎದುರಿಸಿದ್ದರು. ಅಲ್ಲಿನ ಊಟ ಅವರಿಗೆ ಹಿಡಿಸಿರಲಿಲ್ಲ. ಆರೋಗ್ಯ ಸಮಸ್ಯೆ ಉಲ್ಬಣವಾಗಿತ್ತು, ಜ್ವರ, ಭೇದಿ, ನಿದ್ರಾಹೀನತೆ ಕಾಡಿತ್ತು. ಆದರೆ ಇತ್ತೀಚೆಗೆ ನಟ ದರ್ಶನ್ ಜೈಲು ಪರಿಸರಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾರೆ. ಪ್ರತಿ ದಿನ ನಟ ದರ್ಶನ್, ಇತರೆ ಕೈದಿಗಳೊಟ್ಟಿಗೆ ವಾಲಿಬಾಲ್ ಆಟ ಆಡುತ್ತಾ ಸಮಯ ಕಳೆಯುತ್ತಿದ್ದಾರೆ.