ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗ್ರಹಕ್ಕೆ ನಟ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್ರನ್ನು ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆದುಕೊಂಡು ಹೊರಟಿದ್ದರು. ಇದೀಗ ದರ್ಶನ್ ಅವರನ್ನು ಕರೆದುಕೊಂಡು ಹೊರಟಿದ್ದ ಪೊಲೀಸ್ ವಾಹನ ಬಳ್ಳಾರಿ ಜೈಲು ತಲುಪಿವೆ. ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ.
ಇದರ ನಡುವೆ ಈ ವೇಳೆ ದರ್ಶನ್ ಕಪ್ಪು ಬಣ್ಣದ ಪೂಮಾ ಟೀಶರ್ಟ್ ಧರಿಸಿದ್ದರು. ಜತೆಗೆ ಕಾಲರ್‌ಗೆ ಕೂಲಿಂಗ್ ಗ್ಲಾಸ್, ಕೈಯಲ್ಲಿ ಜರ್ಕಿನ್ (ಜಾಕೇಸ್) ವಾಟರ್ ಬಾಟಲ್ ಹಿಡಿದುಕೊಂಡಿದ್ದರು. ಸುತ್ತಲೂ 20 ಕ್ಕೂ ಅಧಿಕ ಪೊಲೀಸರು ಭದ್ರತೆಯೊಂದಿಗೆ ಜೈಲಿನ ವೈದ್ಯಕೀಯ ಕೊಠಡಿಗೆ ಕರೆದುಕೊಂಡು ಹೋದರು.
ನಗು ನಗುತ್ತಲೇ ಜೈಲಿಗೆ ಬಂದ ದರ್ಶನ್ ಜೈಲಿನ ಒಳಕ್ಕೆ ಎಂಟ್ರಿ ನೀಡಿದ್ದಾರೆ. ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ದರ್ಶನ್ ಅಷ್ಟು ಸ್ಟೈಲ್ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಜೈಲಿನ ಉಡುಪು ಯಾಕಿಲ್ಲ?
ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನಕ್ಕೀಡಾಗಿದ್ದು, ಆ ಕೇಸ್‌ನ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆ ಅವರನ್ನು ನ್ಯಾಯಾಂಗ ತನಿಖೆಗೆ ನೀಡಲಾಗಿದೆಯಷ್ಟೇ. ಅವರು ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಜೈಲಿನ ನಿಯಮಗಳಂತೆ ಕೈದಿಗಳಿಗೆ ಮಾತ್ರವೇ ಸಮವಸ್ತ್ರ ನೀಡಲಾಗುತ್ತದೆ. ವಿಚಾರಣಾಧೀನ ಕೈದಿಗಳು ತಮ್ಮ ಇಚ್ಛೆಯ ಸಾಮಾನ್ಯ ಉಡುಪು ಧರಿಸಬಹುದು.
ರಸ್ತೆಗಳಲ್ಲಿ ನೆರೆದಿದ್ದ ಅಭಿಮಾನಿಗಳು
ನಟ ದರ್ಶನ್ ಅವರನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವಾಹನ ಬಳ್ಳಾರಿ ಒಳಗೆ ಪ್ರವೇಶ ಮಾಡುತ್ತಿದ್ದಂತೆ ರಸ್ತೆಗಳಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಮೊಬೈಲ್‌ನಲ್ಲಿ ನಟನ ವಿಡಿಯೋ ಶೂಟ್ ಮಾಡುತ್ತಿದ್ದರು. ಕೆಲ ಅಭಿಮಾನಿಗಳು ಜೈಕಾರ, ಡಿ ಬಾಸ್ ಎಂದು ಕೂಗಿದರು.