ನಟ ದರ್ಶನ್ ಅಭಿನಯದ ಹಳೆಯ ಸಿನಿಮಾ ‘ಕರಿಯ’ (Kariya) ರೀ-ರಿಲೀಸ್ ಆಗಿದ್ದು, ಅಲ್ಲಿ ಅಭಿಮಾನಿಗಳ ದಂಡು ಮೇಳೈಸಿದೆ. ಈ ಕಾರಣಕ್ಕೆ ಅಲ್ಲಿ ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ನಡೆಯಕೂಡದು ಎಂದು ಅಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ. ಒಂದಲ್ಲ ಎರಡಲ್ಲ, ಬರೋಬ್ಬರಿ ಹತ್ತು ಪೊಲೀಸರು ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಹಜವಾಗಿಯೇ ದರ್ಶನ್ ಅಭಿಮಾನಿಗಳು ಅತರೇಕರ ಅಭಿಮಾನದಿಂದ ಸಿನಿಮಾವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲ ಅಭಿಮಾನಿಗಳು ಮೇರೆ ಮೀರಿ ವರ್ತಿಸಿದ್ದು, ಅಂಥಹಾ ಕೆಲವರನ್ನು ಪೊಲೀಸರು ಎಳೆದೊಯ್ದಿದ್ದಾರೆ. ಕೆಲವರಿಗೆ ಲಾಠಿ ಏಟಿನ ರುಚಿ ತೋರಿಸಿದ್ದಾರೆ.
ಬೆಳಿಗಿನಿಂದಲೇ ದರ್ಶನ್ ಅಭಿಮಾನಿಗಳು, ದರ್ಶನ್ರ ಆರೋಪಿ ಸಂಖ್ಯೆ ಹೊಂದಿರುವ ಕಟೌಟ್, ಬ್ಯಾನರ್ಗಳನ್ನು ಚಿತ್ರಮಂದಿರದ ಹೊರಗೆ ಹಾಕಿದ್ದಾರೆ. ಅದರ ಜೊತೆಗೆ ದರ್ಶನ್, ಜೈಲಿನಲ್ಲಿ ಸಿಗರೇಟು ಸೇದುತ್ತಾ ಕೂತಿದ್ದ ಪೋಸ್ಟರ್ ಹಾಕಿದ್ದಾರೆ. ಮಾಧ್ಯಮಗಳ ಮೇಲಿನ ಸಿಟ್ಟಿನಿಂದ ದರ್ಶನ್ ಹೇಳಿದ್ದ ‘ಏನ್ರಿ ಮೀಡಿಯಾ’ ಎಂಬ ಕಟೌಟ್ ಅನ್ನು ಸಹ ಅಭಿಮಾನಿಗಳು ಹಾಕಿದ್ದರು. ಇದೆಲ್ಲದರ ನಡುವೆ ಸಿನಿಮಾ ಪ್ರದರ್ಶನವಾಗುವಾಗ ಮಾಧ್ಯಮಗಳ ವಿರುದ್ಧ ಅಭಿಮಾನಿಗಳು ಘೋಷಣೆ ಸಹ ಕೂಗಿದ್ದರು
ದರ್ಶನ್ ಅಭಿಮಾನಿಯೊಬ್ಬ ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ದರ್ಶನ್ ಅಭಿಮಾನಿಯ ಗಲಾಟೆಗೆ ರೋಸಿ ಹೋದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಥಿಯೇಟರ್ನಿಂದ ಹೊರಗೆ ಎಳೆದುಕೊಂಡು ಹೋಗುವಾಗ ನನ್ನ ಬಿಟ್ಟು ಬಿಡಿ ಅಂತ ಪೊಲೀಸರ ಮುಂದೆ ಗೋಳಾಡಿದ. ಆಟೋದಲ್ಲಿ ಡಿಬಾಸ್ ಫ್ಯಾನ್ ಕರೆದುಕೊಂಡು ಹೋದ ಪೊಲೀಸರು ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.