ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಹೌದು ನಟಿ ದೀಪಿಕಾ ಪಡುಕೋಣೆ ಇಂದು ಬೆಳಿಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರು ನಿನ್ನೆ ಸಂಜೆ ಮುಂಬೈನ ರಿಲಯನ್ಸ್ ಫೌಂಡೇಶನ್ನ ಆಸ್ಪತ್ರೆಗೆ ದಾಖಲಾಗಿದ್ದರು. ರಣ್ವೀರ್ ಸಿಂಗ್-ದೀಪಿಕಾ 2018 ರಲ್ಲಿ ವಿವಾಹವಾಗಿದ್ದರು. ಇದೀಗ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ದೀಪಿಕಾ ಪಡುಕೋಣೆಗೆ ಸೆಪ್ಟೆಂಬರ್ 28 ಗೆ ಹೆರಿಗೆ ದಿನಾಂಕ ನೀಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಸೆಪ್ಟೆಂಬರ್ 08 ರಂದು ಈ ಜೋಡಿಗೆ ಮಗುವಾಗಿದೆ. ಕಳೆದ ವರ್ಷ ಆಲಿಯಾ ಭಟ್-ರಣ್ಬೀರ್ ಕಪೂರ್ ಸಹ ಹೆಣ್ಣು ಮಗುವಿನ ಪೋಷಕರಾದರು.
ದೀಪಿಕಾ ಪಡುಕೋಣೆ ‘ಕಲ್ಕಿ’ ಸಿನಿಮಾದಲ್ಲಿ ನಟಿಸುವ ಸಂದರ್ಭದಲ್ಲಿ ತಾವು ಗರ್ಭಿಣಿ ಆಗಿರುವ ವಿಷಯ ಬಹಿರಂಗಪಡಿಸಿದ್ದರು. ಗರ್ಭಿಣಿ ಆಗಿರುವ ಸಂದರ್ಭದಲ್ಲಿಯೇ ಅವರು ‘ಕಲ್ಕಿ 2898’ ಸಿನಿಮಾದಲ್ಲಿ ನಟಿಸಿದ್ದರು. ಆದರೆ ಅದಾದ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ರಣ್ವೀರ್ ಸಿಂಗ್ ಸಹ ದೀಪಿಕಾ ಗರ್ಭಿಣಿ ಆದ ಬಳಿಕ ಸಿನಿಮಾಗಳಲ್ಲಿ ನಟಿಸುವುದನ್ನು ಕಡಿಮೆ ಮಾಡಿ ಪತ್ನಿಯೊಟ್ಟಿಗೆ ಹೆಚ್ಚು ಸಮಯ ಕಳೆಯಲು ತೊಡಗಿದರು.
ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಹಲವು ಪ್ರದೇಶಗಳಿಗೆ ಪ್ರವಾಸ ತೆರಳಿದರು. ದೀಪಿಕಾ, ತಮ್ಮ ತವರವರಾದ ಬೆಂಗಳೂರಿನಲ್ಲಿ ಸಹ ಸಾಕಷ್ಟು ಸಮಯ ಕಳೆದಿದ್ದರು. ದೀಪಿಕಾರ ಹೆರಿಗೆ ಲಂಡನ್ನಲ್ಲಿ ಆಗಲಿದೆ. ಅಲ್ಲಿಯೇ ದೀಪಿಕಾ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಮುಂಬೈನಲ್ಲಿಯೇ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.