ದಿನಕ್ಕೆ ಒಂದಾದರು ಹಣ್ಣು ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೀಗಾಗಿ ಆರೋಗ್ಯವು ಉತ್ತಮವಾಗಿರುವಲ್ಲಿ ಹಣ್ಣುಗಳ ಪಾತ್ರ ದೊಡ್ಡದು ಎಂದೇ ಹೇಳಬಹುದು. ಬೇರೆ ಹಣ್ಣುಗಳಿಗೆ ಹೋಲಿಕೆ ಮಾಡಿದರೆ ಬಾಳೆಹಣ್ಣು ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ. ವರ್ಷವಿಡೀ ಲಭ್ಯವಾಗುವಂತಹ ಹಣ್ಣಾಗಿದ್ದು, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಮಾಗಿದ ಬಾಳೆಹಣ್ಣು ಹೆಚ್ಚು ದಿನ ಇಡಲು ಆಗುವುದಿಲ್ಲ, ಬಹುಬೇಗನೇ ಕೊಳೆತುಹೋಗುತ್ತದೆ. ಹೀಗಾಗಿ ಹಣ್ಣುಗಳನ್ನು ಸಂರಕ್ಷಿಸುವ ಸಲಹೆಗಳನ್ನು ನೀಡಲಾಗಿದೆ.
ವಿಟಮಿನ್ ಸಿ ಟ್ಯಾಬ್ಲೆಟ್ : ಬಾಳೆಹಣ್ಣುಗಳು ಹಾಳಾಗುವುದನ್ನು ತಡೆಯಲು ನೀವು ವಿಟಮಿನ್ ಸಿ ಟ್ಯಾಬ್ಲೆಟ್‌ನ ಸಹಾಯ ತೆಗೆದುಕೊಳ್ಳಬಹುದು. ಈ ಮಾತ್ರೆಗಳು ಎಲ್ಲ ಮೆಡಿಕಲ್ ಶಾಪ್ ನಲ್ಲಿ ಸಿಗ್ತವೆ. ವಿಟಮಿನ್ ಸಿ ಟ್ಯಾಬ್ಲೆಟ್ ಅನ್ನು ಸ್ವಲ್ಪ ನೀರಿನಲ್ಲಿ ಕರಗಿಸಿ ಮತ್ತು ಬಾಳೆಹಣ್ಣನ್ನು ಈ ನೀರಿನಲ್ಲಿ ಇರಿಸಿ. ಇದ್ರಿಂದ ಬಾಳೆ ಹಣ್ಣು ಹಾಳಾಗುವುದಿಲ್ಲ. ಕೆಲ ದಿನಗಳವರೆಗೆ ಬಾಳಿಕೆ ಬರುತ್ತದೆ.
ಬಾಳೆ ಹಣ್ಣನ್ನು ಫ್ರಿಜ್ ನಲ್ಲಿಡಬೇಡಿ: ಬಾಳೆ ಹಣ್ಣು ಹಾಳಾಗ್ಬಾರದು ಎನ್ನುವ ಕಾರಣಕ್ಕೆ ಅನೇಕರು ಫ್ರಿಜ್ ನಲ್ಲಿ ಇಡ್ತಾರೆ. ಆದ್ರೆ ಅಪ್ಪಿತಪ್ಪಿಯೂ ಫ್ರಿಜ್ ನಲ್ಲಿ ಬಾಳೆ ಹಣ್ಣನ್ನು ಇಡಬಾರದು. ಬಾಳೆಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಅದರ ಸಿಪ್ಪೆ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತವೆ ಮತ್ತು ಬಾಳೆಹಣ್ಣು ಬೇಗನೆ ಹಾಳಾಗುತ್ತದೆ. ಆದ್ದರಿಂದ, ಬಾಳೆಹಣ್ಣುಗಳನ್ನು ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಇಡುವುದು ಉತ್ತಮ.
ಪ್ಲಾಸ್ಟಿಕ್ ನಲ್ಲಿ ಸುತ್ತಿಡಿ : ಬಾಳೆಹಣ್ಣುಗಳು ದೀರ್ಘಕಾಲದವರೆಗೆ ಕೊಳೆಯದಂತೆ ಅಥವಾ ಹಾಳಾಗದಂತೆ ಇಡಲು ಅವುಗಳ ಕಾಂಡಗಳನ್ನು ಒಡೆಯಿರಿ. ಇದರ ನಂತರ, ಬಾಳೆಹಣ್ಣುಗಳನ್ನು ಪಾಲಿಥಿನ್ ಅಥವಾ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ. ಇದರಿಂದಾಗಿ ಬಾಳೆಹಣ್ಣಿನಲ್ಲಿ ಗಾಳಿ ಇರುವುದಿಲ್ಲ ಮತ್ತು ಬಾಳೆಹಣ್ಣುಗಳು ದೀರ್ಘಕಾಲ ತಾಜಾ ಆಗಿರುತ್ತದೆ. ಈ ಟಿಪ್ಸ್ ನಲ್ಲಿ ಯಾವುದನ್ನಾದ್ರೂ ಒಂದನ್ನು ಪಾಲಿಸಿ ಬಾಳೆ ಹಣ್ಣು ಹಾಳಾಗದಂತೆ ರಕ್ಷಿಸಿ.
ಕಾಗದದಲ್ಲಿ ಮುಚ್ಚಿ : ಬಾಳೆಹಣ್ಣಿನ ಕಾಂಡ ಭಾಗ ಮೊದಲು ಕೊಳೆಯಲು ಶುರುವಾಗುತ್ತದೆ. ಅಲ್ಲಿಂದಲೇ ಹಣ್ಣು ಕಪ್ಪಾಗಲು ಶುರುವಾಗುತ್ತದೆ. ಆದ್ದರಿಂದ, ಬಾಳೆಹಣ್ಣನ್ನು ಇಡುವ ಮೊದಲು, ಅದರ ಕಾಂಡವನ್ನು ಕಾಗದ ಅಥವಾ ಪ್ಲಾಸ್ಟಿಕ್‌ನಲ್ಲಿ ಸುತ್ತಿ. ಇದರಿಂದ ಬಾಳೆಹಣ್ಣು ಬೇಗ ಕೆಡುವುದಿಲ್ಲ.
ಬಾಳೆ ಹಣ್ಣಿನ ಹ್ಯಾಂಗರ್ : ಅನೇಕ ಬಾರಿ ವಾರಗಳವರೆಗೆ ಬಾಳೆ ಹಣ್ಣನ್ನು ಇಡಬೇಕಾಗುತ್ತದೆ. ಹಣ್ಣುಗಳನ್ನು ನೆಲಕ್ಕೆ ಇಡುವುದ್ರಿಂದ ಬೇಗ ಕೊಳೆಯುತ್ತದೆ. ಸದಾ ಮನೆಯಲ್ಲಿ ಬಾಳೆ ಹಣ್ಣು ಬೇಕು, ಪ್ರತಿ ದಿನ ಬಾಳೆ ಹಣ್ಣು ತಿನ್ನುತ್ತೇವೆ ಎನ್ನುವವರು ನೀವಾಗಿದ್ದರೆ ಬಾಳೆ ಹಣ್ಣನ್ನು ಇಡುವ ಹ್ಯಾಂಗರ್ ಖರೀದಿ ಮಾಡಿ. ಈ ಹ್ಯಾಂಗರ್‌ಗಳಲ್ಲಿ ಬಾಳೆಹಣ್ಣನ್ನು ಇಡುವುದರಿಂದ ಹಣ್ಣು ಬೇಗ ಕೊಳೆತು ಹಾಳಾಗುವುದಿಲ್ಲ.